ಮೈಸೂರು:ಹುಲಿ ದಾಳಿಗೆ ದನಗಾಹಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಮೇಶ (40) ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಾಗರಹೊಳೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನಲ್ಲಿ ಗ್ರಾಮದ ಹೊರಾವರಣದಲ್ಲಿ ದನ ಮೇಯಿಸಲು ಹೋಗಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ದೃಶ್ಯ ಕಂಡು ರಕ್ಷಿಸಲು ಹೋದ ರೈತನ ಮೇಲೆರಗಿದೆ. ರಮೇಶ್ ಜೋರಾಗಿ ಕಿರುಚಾಡಿದಾಗ, ಅಕ್ಕಪಕ್ಕದಲ್ಲಿ ದನ ಮೇಯಿಸುತ್ತಿದ್ದ ದನಗಾಹಿಗಳು ಹೋಗಿ ಹುಲಿ ಓಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು.
ಬಾಲಕನ ಮೇಲೆ ಚಿರತೆ ದಾಳಿ:9 ವರ್ಷದಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನನ್ನು ಹರ್ಷಿತ್ ಎಂದು ಗುರುತಿಸಲಾಗಿತ್ತು. ಶಾಲೆಯಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ಬಾಲಕನ ಮೇಲೆ ದಾಳಿ ಮಾಡಿತ್ತು. ಇದನ್ನು ಕಂಡ ಜನರು ಕೂಗಾಡಿದ್ದಾರೆ. ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿತ್ತು. ಹರ್ಷಿತ್ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಕಚ್ಚಿ ಗಾಯಗೊಳಿಸಿತ್ತು. ಮತ್ತೊಂದು ಘಟನೆಯಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ಸುಶೀಲಾ ಎಂಬ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿತ್ತು. ದಾಳಿ ವೇಳೆ ಬಾಲಕಿ ಜೋರಾಗಿ ಕಿರುಚಾಟ ನಡೆಸಿದ್ದಳು. ಜನರು ಬರುತ್ತಿರುವುದನ್ನು ಕಂಡ ಚಿರತೆ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಳು.