ಮೈಸೂರು : ಹಾಡು ಹಗಲೇ ಹುಲಿಯೊಂದು ಬಾಲಕನ ಮೇಲೆ ದಾಳಿ ನಡೆಸಿ, ಆತನನ್ನು ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರವನ್ನು ಅರಣ್ಯ ಇಲಾಖೆ ಘೋಷಿಸಿದ್ದು, ಹುಲಿ ಸೆರೆಗೆ ಕಾರ್ಯಾಚರಣೆಯನ್ನು ಆರಂಭಿಸಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ಜಮೀನಿನಲ್ಲಿ ಮರದ ಕೆಳಗೆ ಆಟವಾಡುತ್ತಿದ್ದ ಬಾಲಕನ ಮೇಲೆ ಹುಲಿಯೊಂದು ಸೋಮವಾರ ಮಧ್ಯಾಹ್ನ ದಾಳಿ ನಡೆಸಿತ್ತು. ದಾಳಿ ನಡೆಸಿದ ನಂತರ ಬಾಲಕ ಚರಣ್ (7) ನನ್ನು ಎಳೆದುಕೊಂಡು ಹೋಗಿ ದೇಹದ ಕೆಲವು ಭಾಗಗಳನ್ನು ಹುಲಿ ತಿಂದಿತ್ತು. ಇತ್ತ ಹುಲಿ ದಾಳಿಗೆ ಮಗ ಬಲಿಯಾಗಿರುವುದು ತಿಳಿಯದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನ ತಂದೆ ಕೃಷ್ಣ ನಾಯಕ, ಮಗ ಕಾಣದಿದ್ದಾಗ ಆತನನ್ನು ಹುಡುಕುತ್ತಿದ್ದಾಗ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ಮೃತನ ಕುಟುಂಬಸ್ಥರು ಹಾಗೂ ಕಲ್ಲಹಟ್ಟಿ ಗ್ರಾಮದ ಗ್ರಾಮಸ್ಥರು ಬಾಲಕನ ಮೃತ ದೇಹವನ್ನು ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದ ಹುಲಿಯೊಂದು ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಹುಲಿಯನ್ನೇ ಸೆರೆ ಹಿಡಿಯದೇ ನಿರ್ಲಕ್ಷ್ಯ ವಹಿಸಿದ್ದರಿಂದ ಬಾಲಕನ ಸಾವಿಗೆ ಕಾರಣವಾಯಿತು ಎಂದು ಕಲ್ಲಟ್ಟಿ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಅರಣ್ಯಾಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಮೃತನ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಸರ್ಕಾರದಿಂದ ಸಿಗುವ ಇತರ ಸೌಲಭ್ಯಗಳನ್ನು ಕುಟುಂಬಸ್ಥರಿಗೆ ಶಾಸಕ ಅನಿಲ್ ಚಿಕ್ಕಮಾದು ಕೊಡಿಸುವ ಭರವಸೆ ನೀಡಿದ್ದಾರೆ. ಆನಂತರ ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಸೋಮವಾರ ರಾತ್ರಿ ಕುಟುಂಬದವರಿಗೆ ಬಾಲಕನ ಶವವನ್ನು ಹಸ್ತಾಂತರಿಸಿದ್ದಾರೆ.
ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ :ಬಾಲಕನನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ಆರಂಭಿಸಿದೆ. ಸಾಧ್ಯವಾದಷ್ಟು ಗ್ರಾಮಸ್ಥರು ಸಂಜೆ ವೇಳೆಯಲ್ಲಿ ಮನೆಯಿಂದ ಹೊರ ಬರಬಾರದು ಹಾಗೂ ಹುಲಿ ಕಂಡಲ್ಲಿ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದೇವೆ. ಆದಷ್ಟು ಬೇಗ ಹುಲಿ ಸೆರೆಗೆ ಪ್ರಯತ್ನ ಮಾಡಲಾಗುವುದು ಎಂದು ಡಿಸಿಎಫ್ ಹರ್ಷಕುಮಾರ್ ನರಗುಂದ ಈಟಿವಿ ಭಾರತ್ ಗೆ ಮಾಹಿತಿ ನೀಡಿದರು. ಹೆಚ್.ಡಿ ಕೋಟೆ ತಾಲೂಕು ಅರಣ್ಯ ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಹಾಗಾಗೇ ನಡೆಯುತ್ತಿರುತ್ತವೆ. ಹೀಗಾಗಿ ಇನ್ನಾದರೂ ಈ ರೀತಿ ಘಟನೆಗಳು ಸಂಭವಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕಿದೆ.
ಇದನ್ನೂ ಓದಿ :ಅನುಮಾನಾಸ್ಪದ ರೀತಿಯಲ್ಲಿ ಬಾಲಕನ ಮೃತದೇಹ ಪತ್ತೆ: ಹುಲಿ ಎಳೆದೊಯ್ದಿರುವ ಶಂಕೆ!