ಮೈಸೂರು : ಹಸುವನ್ನು ಬಲಿ ಪಡೆದು ದನಗಾಹಿ ಮೇಲೆ ದಾಳಿ ನಡೆಸಿದ ಹುಲಿ ಸೆರೆಗೆ ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಪ್ರಾರಂಭಿಸುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವೀರಭದ್ರ ಭೋವಿ ಅವರಿಗೆ ಖರ್ಚು ವೆಚ್ಚಗಳನ್ನು ಸರ್ಕಾರ ಮತ್ತು ಅರಣ್ಯ ಇಲಾಖೆಯಿಂದ ಭರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ತಾವು ಕೂಡ ವೈಯಕ್ತಿಕವಾಗಿ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬಿರುವುದಾಗಿ ತಿಳಿಸಿದರು. ಕಳೆದ ವರ್ಷ ಹಾದನೂರು, ಒಡೆಯನಪುರ ಗ್ರಾಮದ ದನಗಾಹಿ ಒಬ್ಬರನ್ನು ಹುಲಿ ಬಲಿ ಪಡೆದುಕೊಂಡಿತ್ತು. ಒಂದು ವರ್ಷ ಕಳೆದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿಲ್ಲ. ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿಯನ್ನು ಕೂಡ ನಮ್ಮ ಗಮನಕ್ಕೆ ತಂದಿಲ್ಲ. ಹುಲಿಯನ್ನು ಸೆರೆ ಹಿಡಿಯಲು ಆನೆಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಕಾಡಂಚಿನ ನಿವಾಸಿಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುವುದಾಗಿ ಅವರು ಹೇಳಿದರು. ಈ ಕುರಿತಂತೆ ನವೆಂಬರ್ 5 ರಂದು ಹೆಡಿಯಾಲ ಭಾಗದಲ್ಲಿ ಸಭೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಏನಿದು ಘಟನೆ ? : ನಂಜನಗೂಡು ತಾಲೂಕಿನ ಮಲ್ಕುಂಡಿ ಸಮೀಪದ ಹೆಡಿಯಾಲ ಕುದುರೆಗುಂಡಿ ಹಿನ್ನೀರು ಪ್ರದೇಶದಲ್ಲಿ ರೈತರೊಬ್ಬರು ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಹುಲಿಯೊಂದು ದಾಳಿ ಮಾಡಿ ಹಸುವನ್ನು ಕೊಂದು ಹಾಕಿತ್ತು. ಹಸುವನ್ನು ರಕ್ಷಿಸಲು ಹೋಗಿದ್ದ ರೈತ ವೀರಭದ್ರ ಭೋವಿ (71) ಅವರ ಮೇಲೂ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.