ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರವನ್ನು ಗೆಲ್ಲಲು ಮೂರು ಪಕ್ಷಗಳು ಹರಸಾಹಸಪಡುತ್ತಿವೆ. ವಿಧಾನಸಭಾ ಚುನಾವಣೆ ಮೇಲೆ ಕಣ್ಣಿರಿಸಿರುವುದರಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವ ಜೆಡಿಎಸ್ ಶ್ರೀಕಂಠೇಗೌಡ ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋತಿರುವ ರವಿಶಂಕರ್ ಬಿಜೆಪಿಯಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ. ಮಾದೇಗೌಡರ ಪುತ್ರ ಮಧು ಜಿ.ಮಾದೇಗೌಡರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ.ರಾಮು ಮೇಲೆ ಜೆಡಿಎಸ್ ವಿಶ್ವಾಸ ಇರಿಸಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಒಮ್ಮೆಯೂ ಗೆದ್ದಿಲ್ಲ. ಪ್ರತಿ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಜೆಡಿಎಸ್ ಗೆದ್ದಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಕಲ ತಂತ್ರವನ್ನು ಅನುಸರಿಸುತ್ತಿದೆ. ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೊಂದಲಕ್ಕೆ ಎಡೆಮಾಡಿಕೊಡದೇ ಒಮ್ಮತದಿಂದ ಮಧು ಜಿ. ಮಾದೇಗೌಡ ಅವರನ್ನು ಕಣಕ್ಕಿಳಿಸಿದ್ದಾರೆ. ಮಧು ಅವರಿಗೆ ಅವರ ತಂದೆ ಮಾಜಿ ಸಂಸದ ದಿವಂಗತ ಮಾದೇಗೌಡ ಅವರ ಜನಪ್ರಿಯತೆ ಬೆಂಗಾವಲಾಗಲಿದೆ. ಹಲವೆಡೆ ನಮ್ಮ ಮತ ಮಾದೇಗೌಡರಿಗೆಂದು ಮತದಾರರು ಹೇಳುತ್ತಿದ್ದಾರೆ. ಇದರೊಂದಿಗೆ ಜೆಡಿಎಸ್ ಮೇಲಿರುವ ಅಸಮಾಧಾನದ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಸರ್ವ ಪ್ರಯತ್ನ ನಡೆಸುತ್ತಿದೆ. 1992ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ನಂತರ ಒಂದು ಉಪ ಚುನಾವಣೆ ಸೇರಿದಂತೆ ಆರು ಚುನಾವಣೆ ನಡೆದಿದೆ. ಇದರಲ್ಲಿ ಬಿಜೆಪಿ ನಾಲ್ಕು ಬಾರಿ ಜಯ ಗಳಿಸಿದೆ. 2016ರಲ್ಲಿ ಜೆಡಿಎಸ್ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಮತ್ತೆ ಕ್ಷೇತ್ರ ವಶಕ್ಕೆ ಬಿಜೆಪಿ ಗಂಭೀರ ಪ್ರಯತ್ನ ನಡೆಸಿದೆ. ಸ್ವತಃ ಸಿಎಂ ಬೊಮ್ಮಾಯಿ ಅಖಾಡಕ್ಕೆ ಧುಮುಕಿದ್ದು, ಸಚಿವರು ಹಾಗೂ ಮುಖಂಡರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.