ಮೈಸೂರು:ಅಪಘಾತದಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಪ್ರಾಪ್ತ ಬಾಲಕನ ಹುಚ್ಚಾಟಕ್ಕೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಟಿ.ಕೆ.ಬಡಾವಣೆ ನಿವಾಸಿಗಳಾದ ರಮೇಶ್ (41), ಪತ್ನಿ ಉಷಾ (36), ಪುತ್ರ ಮನೀಶ್ (5) ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೃತಪಟ್ಟಿದ್ದು, ಮತ್ತೊಬ್ಬ ಪುತ್ರ ಸಿದ್ದಾರ್ಥ (3) ಗಂಭೀರ ಗಾಯದಿಂದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಚಿಕಿತ್ಸೆ ವೆಚ್ಚ ಹಾಗೂ ಮುಂದಿನ ಭವಿಷ್ಯ ಯಾರು ರೂಪಿಸುತ್ತಾರೆ ಎಂಬ ಚಿಂತೆ ಸಂಬಂಧಿಕರನ್ನು ಕಾಡಿದೆ.
ಏನಿದು ಘಟನೆ:ರಮೇಶ್ ತಮ್ಮ ಪತ್ನಿಯ ಸಂಬಂಧಿಕರೊಬ್ಬರ ತಿಥಿ ಕಾರ್ಯಕ್ಕಾಗಿ ಸಿದ್ದಲಿಂಗಪುರಕ್ಕೆ ಕುಟುಂಬ ಸಮೇತರಾಗಿ ಹೋಗಿ ಊಟ ಮುಗಿಸಿಕೊಂಡು ವಾಪಸ್ ಬರುತ್ತಿದ್ದರು. ಗುರುವಾರ ರಾತ್ರಿ 10.30ರ ವೇಳೆ 9ನೇ ತರಗತಿಯ ಅಪ್ರಾಪ್ತ ಬಾಲಕ ಪೂರ್ಣ ಪ್ರಮಾಣದಲ್ಲಿ ಕಾರು ಕಲಿಯದೆ ಮುಖ್ಯ ರಸ್ತೆಗೆ ಬಂದು ಮೂವರ ಪ್ರಾಣ ಪಕ್ಷಿ ಹಾರಿಸಿದ್ದಾನೆ ಎನ್ನಲಾಗಿದೆ.