ಕುಪ್ಪಣ್ಣ ಪಾರ್ಕ್ನಲ್ಲಿ ಮೂರು ದಿನಗಳ ಮಾವು ಮೇಳ ಮೈಸೂರು: ರೈತರಿಂದ ಮಧ್ಯವರ್ತಿಗಳಿಲ್ಲದೇ, ನೇರವಾಗಿ ಗ್ರಾಹಕರಿಗೆ ನೈಸರ್ಗಿಕವಾದ ಮಾವು ಮತ್ತು ಹಳಸಿನ ಹಣ್ಣನು ತಲುಪಿಸುವ ನಿಟ್ಟಿನಲ್ಲಿ ಮೂರು ದಿನಗಳ ಮಾವು ಹಾಗೂ ಹಲಸಿನ ಹಣ್ಣಿನ ಮಾರಾಟ ಮೇಳ ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲಿ ಇಂದಿನಿಂದ ಆರಂಭವಾಗಿದೆ. ಇದರಲ್ಲಿ ರೈತರು ನೇರವಾಗಿ ಮಾರಾಟ ಮಳಿಗೆಯ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ಸೌಲಭ್ಯವನ್ನು, ಜಿಲ್ಲಾ ತೋಟಗಾರಿಕಾ ಇಲಾಖೆ ಕಲ್ಪಿಸಿಕೊಟ್ಟಿದೆ.
ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದೊಂದಿಗೆ, ನಗರದ ಕುಪ್ಪಣ್ಣ ಪಾರ್ಕ್ನಲ್ಲಿ ಮೇ 26 ರಿಂದ 28 ರವರೆಗೆ ಮೂರು ದಿನಗಳ ಕಾಲ ಮಾವು ಮತ್ತು ಹಲಸಿನ ಮೇಳ ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ಮೈಸೂರು, ಮಂಡ್ಯ, ಕನಕಪುರ ಮತ್ತು ರಾಮನಗರ ಜಿಲ್ಲೆಯ 23 ರೈತರು ಭಾಗವಹಿಸಿದ್ದಾರೆ. 24 ಮಳಿಗೆಗಳಿದ್ದು, ರೈತರಿಗೆ ಉಚಿತವಾಗಿ ಮಳಿಗೆಗಳನ್ನು ತೋಟಗಾರಿಕಾ ಇಲಾಖೆಯು ಕಲ್ಪಿಸಿಕೊಟ್ಟಿದೆ.
ಇದನ್ನೂ ಓದಿ:ವಿಜಯಪುರದಲ್ಲಿ ಮೊದಲ ಬಾರಿಗೆ ದ್ರಾಕ್ಷಿ ಪ್ರದರ್ಶನ, ಮಾರಾಟ ಮೇಳ ಆಯೋಜನೆ..
40 ವಿವಿಧ ತಳಿಯ ಮಾವು ಮಾರಾಟ:ಮಾವಿನಲ್ಲಿ 330 ವಿವಿಧ ಬಗೆಯ ಮಾವಿನ ತಳಿಗಳಿದ್ದು, ಅದರಲ್ಲಿ 40 ವಿವಿಧ ಬಗೆಯ ಮಾವಿನ ಹಣ್ಣನ್ನು ಈ ಮೇಳದಲ್ಲಿ ಮಾರಾಟ ಮಾಡಲಾಗುವುದು, ಅದರಲ್ಲಿ ವಿಶೇಷವಾಗಿ ರಸಪುರಿ, ಬಾದಾಮಿ, ತೋತಾಪುರಿ, ರತ್ನಗಿರಿ, ಸಿಂಧೂರ, ಸೇಲಂ, ಮಲಗೊಬ, ಬಾಗೇಪಲ್ಲಿ, ದಸೇರಿ, ಸಿರಸಿ, ಕೇಸರ್, ಸಕ್ಕರೆಗುತ್ತಿ, ಅಮ್ರಪಾಲಿ, ದಿಲ್ ಪಸಂದ್ ಸೇರಿದಂತೆ 40 ವಿವಿಧ ಬಗೆಯ ಮಾವಿನ ಹಣ್ಣನ್ನು ಈ ಮೇಳದಲ್ಲಿ ಮಾರಾಟ ಮಾಡಲಾಗುವುದು.
ಇಂದಿನಿಂದ ಮೂರು ದಿನಗಳ ಕಾಲ, ಅಂದರೆ ಬೆಳಗ್ಗೆ 11 ಗಂಟೆಯಿಂದ ಸಂಜೆ 5.30 ರವರೆಗೆ ಗ್ರಾಹಕರು ನೇರವಾಗಿ ಕುಪ್ಪಣ್ಣ ಪಾರ್ಕ್ಗೆ ಬಂದು ಮಾವು ಮತ್ತು ಹಲಸಿನ ಹಣ್ಣನ್ನು ಕೊಂಡುಕೊಳ್ಳಬಹುದು. ನೇರವಾಗಿ ಗ್ರಾಹಕರಿಗೆ ಅನುಕೂಲವಾಗಲಿ ಹಾಗೂ ರೈತರಿಗೆ ಪ್ರಯೋಜನ ಆಗಲಿ ಎಂಬ ಉದ್ದೇಶದಿಂದ ಈ ಮಾವು ಮೇಳವನ್ನು ಆಯೋಜನೆ ಮಾಡಲಾಗಿದೆ. ರೈತರ ಜೊತೆ ಚರ್ಚೆ ಮಾಡಿ ಬೆಲೆ ನಿಗದಿ ಮಾಡಲಾಗಿದ್ದು, ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ತಿಳಿಸಲಾಗಿದೆ. ಈ ಬಾರಿ ಮಾವಿನ ಇಳುವರಿ ಕಡಿಮೆ ಇದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೆ. ರುದ್ರೇಶ್ ಮಾಹಿತಿ ನೀಡಿದ್ದಾರೆ. ರೈತರು ಮತ್ತು ಗ್ರಾಹಕರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಮಾವು ಹಾಗೂ ಹಲಸು ಮಾರಾಟ ಮೇಳಕ್ಕೆ ಭೇಟಿ ನೀಡಿದ್ದು, ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸೇರಿ ಹಣ್ಣುಗಳ ಮಳಿಗೆಗಳಿಗೆ ಭೇಟಿ ನೀಡಿದರು. ಮಾತ್ರವಲ್ಲದೇ ಮಳಿಗೆಗಳ ರೈತರ ಜೊತೆಗೂ ಸಂಭಾಷಣೆ ನಡೆಸಿದ್ದಾರೆ. ಬೆಳೆ ಹಾಗೂ ಹಣ್ಣುಗಳ ವೈವಿಧ್ಯತೆ, ರುಚಿ ಬಗ್ಗೆ ವಿಚಾರಿಸಿದ್ದಾರೆ. ಕೆಲವೊಂದು ಮಳಿಗೆಗಳಲ್ಲಿ ರೈತರು ನೀಡಿದ ಹಣ್ಣುಗಳನ್ನು ಸವಿದಿದ್ದಾರೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಸಮುದ್ರ ಸುರಂಗ ಮಾರ್ಗ: ಕಾಣಸಿಗುತ್ತಿವೆ ಕಲರ್‌ಫುಲ್ ಮೀನುಗಳು..