ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜುಲೈ 31( ಸೋಮವಾರದಿಂದ) ಮೂರು ದಿನಗಳ ಕಾಲ ಜಿ-20 ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆ ಅರಮನೆ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಭಾರತವು 100ನೇ ಜಿ-20 ಶೃಂಗಸಭೆಯ ಆತಿಥ್ಯ ವಹಿಸಿದ್ದು, ಈ ಸಭೆಯು ಮೈಸೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.
ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಶೃಂಗಸಭೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಬಗ್ಗೆ ಸಮಾಲೋಚನೆ ನಡೆದಿತ್ತು. ಈಗ ಮೈಸೂರಿನಲ್ಲಿ ಸೋಮವಾರದಿಂದ ಆರಂಭವಾಗುತ್ತಿರುವ ಶೃಂಗಸಭೆಯಲ್ಲಿ ಪಾರಂಪರಿಕತೆ ಬಗ್ಗೆ ಸಮಾಲೋಚನೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ಜಿ-20 ಶೃಂಗಸಭೆಯ ಅಧ್ಯಕ್ಷರಾಗಿದ್ದಾರೆ. 2022ರ ಡಿಸೆಂಬರ್‌ನಿಂದ ಆರಂಭವಾಗಿರುವ ಈ ಸಭೆ 2023ರ ನ. 30ರ ವರೆಗೆ ನಡೆಯಲಿದೆ.
ಮೈಸೂರಿನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಅಮೆರಿಕ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಜಪಾನ್, ಭಾರತ, ಫ್ರಾನ್ಸ್, ಜರ್ಮನಿ ಸೇರಿದಂತೆ 20 ದೇಶಗಳ 250ಕ್ಕೂ ಹೆಚ್ಚು ಮಂದಿ ವಿದೇಶಿ ಗಣ್ಯರು ಆಗಮಿಸಲಿದ್ದಾರೆ. ನಗರದ ರ್ಯಾಡಿಸನ್ ಹೋಟೆಲ್‌ನಲ್ಲಿ ಜುಲೈ 31 ರಿಂದ ಆಗಸ್ಟ್ 1ಮತ್ತು 3 ರಂದು ಸಭೆ ನಡೆಯಲಿದೆ. ಜತೆಗೆ ವಿದೇಶಿ ಪ್ರತಿನಿಧಿಗಳು ವಾಸ್ತವ್ಯ ಹೂಡಲು ಹೈವೇ ವೃತ್ತದ ಬಳಿ ಇರುವ ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರವಾಸಿ ತಾಣಗಳ ವೀಕ್ಷಣೆ:ಶೃಂಗಸಭೆಯ ನಂತರ ವಿದೇಶಿ ಪ್ರತಿನಿಧಿಗಳಿಗೆ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ ಅರಮನೆ ವೀಕ್ಷಣೆ, ಆ. 1 ರಂದು ಕೆಆರ್‌ಎಸ್ ಹಾಗೂ ಶ್ರೀರಂಗಪಟ್ಟಣ ವೀಕ್ಷಣೆ ಹಾಗೂ ಆ. 3 ರಂದು ಸೋಮನಾಥಪುರ ವೀಕ್ಷಣೆ ಮಾಡಲಿದ್ದಾರೆ.