ಕರ್ನಾಟಕ

karnataka

ETV Bharat / state

ಪಿರಿಯಾಪಟ್ಟಣದ ಕೆರೆಯಲ್ಲಿ ಶವ ಪತ್ತೆ ಪ್ರಕರಣ: ಆರೋಪಿಗಳು ಬಾಯ್ಬಿಟ್ಟ ಕೊಲೆ ರಹಸ್ಯ

ಜೂನ್​ 25ರಂದು ಪಿರಿಯಾಪಟ್ಟಣದ ಬಿಎಂ ಮುಖ್ಯರಸ್ತೆಯಲ್ಲಿರುವ ಅರಸಿನ ಕೆರೆಯಲ್ಲಿ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

By

Published : Jun 28, 2021, 12:03 PM IST

Mysuru
ಮೂವರು ಆರೋಪಿಗಳ ಬಂಧನ

ಮೈಸೂರು: ಜೂನ್​ 25ರಂದು ಪಿರಿಯಾಪಟ್ಟಣದ ಬಿಎಂ ಮುಖ್ಯ ರಸ್ತೆಯಲ್ಲಿರುವ ಅರಸಿನ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪಿರಿಯಾಪಟ್ಟಣ ನಿವಾಸಿಗಳಾದ ಸೈಯದ್ ಜಲೀಲ್, ಫಯಾಜ್ ಅಹ್ಮದ್ ಮತ್ತು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಪುಟ್ಟರಂಗ ಬಂಧಿತರು.

ಪಿರಿಯಾಪಟ್ಟಣದ ಕೆರೆ ಬಳಿ ಪೊಲೀಸರಿಂದ ಪರಿಶೀಲನೆ

ಕೊಲೆಯಾದ ವ್ಯಕ್ತಿಯನ್ನು ಪಿರಿಯಾಪಟ್ಟಣದ ಕೆ.ಎಂ ಬಡಾವಣೆಯ ನಿವಾಸಿ ಉದಯ್ ಎಂದು ಗುರುತಿಸಿ, ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಪೊಲೀಸರು, ಸಂಶಯದ ಮೇರೆಗೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.

ಘಟನೆಯ ವಿವರ:

ಆರೋಪಿ ಫಯಾಜ್ ಅಹ್ಮದ್ ಪಟ್ಟಣದ ಹಳೆಯ ಮಹದೇಶ್ವರ ಟೆಂಟ್​ನ ಪಕ್ಕ ಗುಜರಿ ಅಂಗಡಿ ನಡೆಸುತ್ತಿದ್ದ. ಇವನ ಜೊತೆ ಪುಟ್ಟರಂಗ ಸಹ ಕೆಲಸ ಮಾಡುತ್ತಿದ್ದ. ಇನ್ನೋರ್ವ ಆರೋಪಿ ಸೈಯದ್ ಜಲೀಲ್ ಮತ್ತು ಕೊಲೆಯಾದ ಉದಯ್ ಇದೇ ಅಂಗಡಿಗೆ ಗುಜರಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಉದಯ್ ಮತ್ತು ಸೈಯದ್ ಜಲೀಲ್​ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಉದಯ್ ಮದ್ಯದ ಬಾಟಲಿಯಿಂದ ಜಲೀಲ್ ಮೇಲೆ ಹಲ್ಲೆ ಮಾಡಿದ್ದ.

ಇದರಿಂದ ಕುಪಿತಗೊಂಡ ಸಯ್ಯದ್, ರಾತ್ರಿ ತನ್ನ ಜೊತೆ ಗುಜರಿ ಶೆಡ್​ನಲ್ಲೇ ಮಲಗಿದ್ದ ಉದಯ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಗುಜರಿಯ ಮಧ್ಯೆ ಎಸೆದಿದ್ದಾನೆ. ಬೆಳಿಗ್ಗೆ ಅಂಗಡಿಗೆ ಬಂದ ಫಯಾಜ್ ಅಹ್ಮದ್ ಅಲ್ಲಲ್ಲಿ ರಕ್ತದ ಕಲೆಗಳು ಬಿದ್ದಿರುವುದನ್ನು ಕಂಡು ವಿಚಾರಿಸಿದಾಗ ಉದಯ್​ನನ್ನು​ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಇದರಿಂದ ಆತಂಕಗೊಂಡ ಫಯಾಜ್, ತನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಪುಟ್ಟರಂಗನನ್ನು ಜೊತೆಗೂಡಿಸಿಕೊಂಡು ಸೈಯದ್ ನೆರವಿನೊಂದಿಗೆ ಶವವನ್ನು ಗೋಣಿ ಚೀಲದಲ್ಲಿ ಸುತ್ತಿ ಪಕ್ಕದಲ್ಲೇ ಇದ್ದ ಅರಸಿನ ಕೆರೆಗೆ ಎಸೆದಿದ್ದರು.

ಜೂನ್​ 25ರ ಶುಕ್ರವಾರ ಬೆಳಿಗ್ಗೆ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಂಜೆ ವೇಳೆಗೆ ಶವದ ಗುರುತು ಪತ್ತೆ ಹಚ್ಚಿದ ಪಟ್ಟಣದ ಪೊಲೀಸರು ಎರಡೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ಮೈಸೂರು : ಕೆರೆಯಲ್ಲಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ!

ABOUT THE AUTHOR

...view details