ಮೈಸೂರು: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕದ್ದ ಕಳ್ಳರು, ಆ ಮನೆ ಮಾಲೀಕನ ಬೈಕ್ನಲ್ಲಿ ಪರಾರಿಯಾಗಿರುವ ಘಟನೆ ಇಲ್ಲಿ ನಂಜನಗೂಡು ತಾಲೂಕಿನ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ವಿದ್ಯಾನಗರ ಬಡಾವಣೆಯ ನಿವಾಸಿ ಧರಣಿ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಧರಣಿಕುಮಾರ್ ಕಾರ್ಯನಿಮಿತ್ತ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವಿಷಯ ತಿಳಿದಿದ್ದ ಕಳ್ಳರು ರಾತ್ರಿ ವೇಳೆ ಮನೆಯ ಬಾಗಿಲು ಒಡೆದು 75 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಹಾಗೂ 15 ಸಾವಿರ ರೂಪಾಯಿ ನಗದು ಕದ್ದಿದ್ದಾರೆ. ನೆರೆಹೊರೆಯ ಜನರು ಬರುತ್ತಿದ್ದಂತೆ ಮನೆ ಮಾಲೀಕನ ಬೈಕ್ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಳಿಕ ಬೈಕ್ ಅನ್ನು ಹೊರವಲಯದ ಮಲ್ಲನಮೂಲೆ ಮಠದ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ವಿಷಯ ತಿಳಿದ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ತಪಾಸಣೆ ನಡೆಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.