ಮೈಸೂರು: ರಾಜ್ಯ ರಾಜಕೀಯದಲ್ಲಿ ಉಂಟಾದ ದಿಢೀರ್ ಬೆಳವಣಿಗೆಯ ಹಿನ್ನೆಲೆಯಲ್ಲಿ ದಸರಾ ಸಿದ್ಧತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು, ಈ ಬಾರಿಯ ದಸರಾ ಹೇಗೆ ನಡೆಯುತ್ತದೆ ಎಂಬ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿ ದಸರಾಗೆ ಕೇವಲ 54 ದಿನಗಳು ಬಾಕಿ ಇವೆ. ಜೂನ್ ತಿಂಗಳಲ್ಲಿ ದಸರಾ ಉನ್ನತ ಸಭೆ ನಡೆಯಬೇಕಿತ್ತು. ಆದರೆ, ರಾಜಕೀಯ ಗೊಂದಲಗಳು ಹಾಗೂ ಬದಲಾವಣೆಗಳಿಂದ ಇನ್ನೂ ಉನ್ನತ ಮಟ್ಟದ ದಸರಾ ಸಮಿತಿ ಸಭೆ ನಡೆದಿಲ್ಲ. ಜೊತೆಗೆ ದಸರಾ ಮುನ್ನ ಅರಮನೆಗೆ 45 ದಿನಗಳ ಮುಂಚೆ ಆಗಮಿಸಬೇಕಾಗಿದ್ದ ಆನೆಗಳ ಆಯ್ಕೆಯೂ ಸಹ ಇನ್ನೂ ನಡೆದಿಲ್ಲ. ಮುಖ್ಯವಾಗಿ ನೂತನ ಸರ್ಕಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಯಾರು ಎಂಬ ಬಗ್ಗೆಯೂ ಮಾಹಿತಿ ಖಚಿತವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಬದಲಾವಣೆಗಳು. ಇದರಿಂದ ದಸರಾ ಯಾವ ರೀತಿ ನಡೆಯುತ್ತದೆ ಎಂಬುದೇ ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.