ಮೈಸೂರು: ಅಗ್ನಿ ಅವಘಡಗಳು ಸಂಭವಿಸಿದರೆ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನ ಸಮೇತ ತೆರಳಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಅಗ್ನಿಶಾಮಕ ಠಾಣೆಗೂ ಮತ್ತು ಅಗ್ನಿ ಸಂಭವಿಸಿದ ಸ್ಥಳಕ್ಕೂ ಅಂತರ ಕಡಿಮೆಯಿದ್ದಲ್ಲಿ ಮಾತ್ರ ಬೆಂಕಿಯನ್ನು ಬೇಗ ನಿಯಂತ್ರಿಸಲು ಸಾಧ್ಯ.
ಹಾಗಾಗಿ, ಪ್ರತಿ ಜಿಲ್ಲೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿಶಾಮಕ ಠಾಣೆಗಳು ಮತ್ತು ಸೂಕ್ತ ಪ್ರಮಾಣದ ಸಿಬ್ಬಂದಿ ಜತೆಗೆ ನೀರಿಗೆ ಯಾವುದೇ ಕೊರತೆಯಾಗದಂತೆ ಸೂಕ್ತ ವ್ಯವಸ್ಥೆ ಇರಬೇಕು.
ಜಿಲ್ಲೆಯಲ್ಲಿದೆ 11 ಅಗ್ನಿಶಾಮಕ ಠಾಣೆಗಳು ಜಿಲ್ಲೆಯಲ್ಲಿ ಸಾಕಷ್ಟು ಅಗ್ನಿಶಾಮಕ ಠಾಣೆಗಳಿವೆ. ಸಿಬ್ಬಂದಿ ಕೊರತೆಯೂ ಇಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ಈಟಿವಿ ಭಾರತಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಅಗ್ನಿಶಾಮಕ ಠಾಣೆಗಳು :ಅಗ್ನಿಶಾಮಕ ಠಾಣೆಗೂ ಮತ್ತು ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೂ ಹೆಚ್ಚಿನ ಅಂತರವಿದ್ದರೆ ಅಗ್ನಿ ಹರಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತದೆ. ಹಾಗಾಗಿ, ಜಿಲ್ಲೆಯಲ್ಲಿ ಅಲ್ಲಲ್ಲಿ ಎನ್ನುವಂತೆ ಹೆಚ್ಚಿನ ಅಗ್ನಿಶಾಮಕ ಠಾಣೆಗಳಿರಬೇಕು.
ಆಗ ಮಾತ್ರ ಅಲ್ಲೇ ಹತ್ತಿರವಿರುವ ಅಗ್ನಿಶಾಮಕ ಠಾಣೆಯಿಂದ ಸಿಬ್ಬಂದಿ ಆದಷ್ಟು ಬೇಗ ತೆರಳಿ ಬೆಂಕಿ ನಂದಿಸಲು ಸಾಧ್ಯವಾಗುತ್ತದೆ. ಮೈಸೂರು ನಗರದಲ್ಲಿ ಸರಸ್ವತಿ ಪುರಂ, ಹೆಬ್ಬಾಳ, ಬನ್ನಿಮಂಟಪ ಹಾಗೂ ಆರ್‌ಬಿಐ ಹೀಗೆ ಒಟ್ಟು 4 ಅಗ್ನಿಶಾಮಕ ಠಾಣೆಗಳಿವೆ. ಇನ್ನು, ಜಿಲ್ಲೆಯ 7 ತಾಲೂಕುಗಳಲ್ಲಿ 7 ಅಗ್ನಿಶಾಮಕ ಠಾಣೆಗಳಿವೆ. ಜಿಲ್ಲೆಯಲ್ಲಿ ಒಟ್ಟು 11 ಅಗ್ನಿಶಾಮಕ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ.
ಲಾಕ್ಡೌನ್ ಸಂದರ್ಭ ಕಡಿಮೆ ಪ್ರಕರಣ :ಜನವರಿಯಿಂದ ಮಾರ್ಚ್ 30ರವರೆಗೆ 105 ಅಗ್ನಿ ಅವಘಡಗಳು ಸಂಭವಿಸಿವೆ. ಲಾಕ್ಡೌನ್ ಸಂದರ್ಭದಲ್ಲಿ ಸಂಭವಿಸಿರುವ ಅಗ್ನಿ ಅವಘಡಗಳ ಪ್ರಮಾಣ ಕಡಿಮೆ ಅಂತಾರೆ ಅಧಿಕಾರಿ ರಾಜು.
ಉಪಕರಣಗಳು-ಸಿಬ್ಬಂದಿ ಕೊರತೆಯಿಲ್ಲ :ಜಿಲ್ಲೆಯಲ್ಲಿ ಹೆಚ್ಚು ಅಗ್ನಿಶಾಮಕ ಠಾಣೆಗಳಿದ್ದರೆ ಸಾಲದು. ಸೂಕ್ತ ಸಿಬ್ಬಂದಿ ಜತೆಗೆ ಅಗ್ನಿ ನಂದಿಸಲು ಬೇಕಾದ ವಾಹನ, ಉಪಕರಣಗಳು ಸಹ ಅಗತ್ಯ. ಅದರಂತೆ ಮೈಸೂರು ನಗರ ಹಾಗೂ ತಾಲೂಕು ಕೇಂದ್ರದ ಅಗ್ನಿಶಾಮಕ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದಿಲ್ಲ ಮತ್ತು ಉಪಕರಣಗಳ ಕೊರತೆಯೂ ಸಹ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಗಣಿ ಜಿಲ್ಲೆಗೆ 10 ಸಾಕಾಗ್ತಿಲ್ಲ, ಇನ್ನೂ 2 ಅಗ್ನಿ ಶಾಮಕ ಠಾಣೆ ಸ್ಥಾಪನೆಗೆ ಪ್ರಸ್ತಾವನೆ