ಮೈಸೂರು:ತಿ.ನರಸೀಪುರ ಪಟ್ಟಣದ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ತಿ.ನರಸೀಪುರದ ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕರಾದ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಡಿಜಿಟಲ್ ಲಾಕರ್ನಲ್ಲಿಟ್ಟಿದ್ದ ಸುಮಾರು 3 ಕೆ.ಜಿ 250 ಗ್ರಾಂ ವಿವಿಧ ಮಾದರಿಯ ಚಿನ್ನದ ಒಡವೆಗಳು, 12 ಕೆ.ಜಿ ಬೆಳ್ಳಿ ಗಟ್ಟಿ ಹಾಗೂ 30 ಲಕ್ಷ ರೂ.ನಗದು ಹಣವನ್ನು ಕಳ್ಳತನವಾಗಿತ್ತು.
ವಿಶೇಷ ತಂಡ ರಚನೆ:ಈ ಬಗ್ಗೆ ಮಾಲೀಕರಾದ ಶ್ರೀನಿವಾಸ್ ಅವರು ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರ ನಿರ್ದೇಶನದಂತೆ ಅಪಾರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರ ನೇತೃತ್ವದಲ್ಲಿ ಪಿಐ ಶ್ರೀಕಾಂತ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್, ತಿ.ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್, ಪಿಎಸ್ಐ ಜಯಪ್ರಕಾಶ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.
ತಿ. ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಸನದ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನ ಇನ್ನಿಬ್ಬರು ಸಹಚರರೊಂದಿಗೆ ತಿ.ನರಸೀಪುರದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಯಿಂದ 791.510 ಗ್ರಾಂ ಚಿನ್ನ ಮತ್ತು 499.260 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.