ಮೈಸೂರು :ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇತರೆ ಇಲಾಖೆಗಳ ಅನುದಾನವನ್ನೂ ಕ್ರೋಢೀಕರಿಸಿ ಬಳಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಆರೋಪಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದರು.
ಹುಣಸೂರು ಶಾಸಕ ಮಂಜುನಾಥ್ ಮಾತನಾಡಿ,ಕ್ವಾರಂಟೈನ್‌ಗೆ ಪ್ರಧಾನಿ ಮೋದಿ ಮಾದರಿ. ಬಿಜೆಪಿಯವ್ರು ಮಾದರಿ ಮಾದರಿ ಅಂತ ಬೊಬ್ಬೆ ಹೊಡೆಯುತ್ತಾರೆ.
ಕಳೆದ ಏಳು ವರ್ಷದಿಂದ ಮೋದಿ ಜನರಿಂದ ದೂರವಾಗಿ ಕ್ವಾರಂಟೈನ್‌ನಲ್ಲೇ ಇದ್ದಾರೆ. ಮೋದಿ ನಿಲುವನ್ನೇ ಅನುಸರಿಸಿ ಮನೆಯಲ್ಲೇ ಇದ್ದು, ಆರೋಗ್ಯ ಉಳಿಸಿಕೊಳ್ಳಿ ಎಂದು ಲೇವಡಿ ಮಾಡಿದರು.
ಟಾಸ್ಕ್ ಫೋರ್ಸ್ ಕಮಿಟಿ ದಸರಾ ಸಮಿತಿ ಆಗಬಾರದು: ಉಪ ಸಮಿತಿಗಳೇ ಬೇರೆ, ಸ್ವಾಗತ ಸಮಿತಿಯೇ ಬೇರೆ.ಇಂತಹ ಯುದ್ಧದ ಸಮಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಪ್ರತಿ ಪಕ್ಷಗಳು ಜಿಲ್ಲಾಡಳಿತದ ಕೈಜೋಡಿಸಲು ಸಿದ್ಧ ಇವೆ.
ಟಾಸ್ಕ್ಫೋರ್ಸ್ ಕಮಿಟಿ ರಚನೆಯಲ್ಲಿ ರಾಜಕೀಯ ಬೇಡ. ಎಲ್ಲ ಶಾಸಕರನ್ನ ಒಟ್ಟುಗೂಡಿಸಿ ಕೆಲಸ ಮಾಡಿ. ನನ್ನ ಕ್ಷೇತ್ರದಲ್ಲಿ ಆರೋಗ್ಯ ರಕ್ಷಾ ಹಣದಿಂದ ಆಕ್ಸಿಜನ್ ಖರೀದಿ ಮಾಡುತ್ತಿದ್ಧೇವೆ. ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಸಮಸ್ಯೆ ಇದೆ.
ಸರ್ಕಾರದ ನಿಲುವು ಮನೆಗೆ ಬೆಂಕಿ ಹಚ್ಚಿದ ಮೇಲೆ ಬಾವಿ ತೋಡಿದಂತಾಗಬಾರದು. ಸುಳ್ಳು ಹೇಳಿಕೆಗಳನ್ನ ನೀಡಿ ಮಾಧ್ಯಮಗಳನ್ನ ದುರ್ಬಳಕೆ ಮಾಡಿಕೊಳ್ಳಬೇಡಿ. ನ್ಯೂನ್ಯತೆ ಮುಚ್ಚಿ ಹಾಕಲು ವಿಚಾರ ಡೈವರ್ಟ್ ಮಾಡಲು ಹೊರಟಿದ್ದೀರ ಎಂದು ಕಿಡಿಕಾರಿದರು.
ಶಾಸಕ ತನ್ವೀರ್‌ಸೇಠ್ ಮಾತನಾಡಿ,ಔಷಧಿ ಖರೀದಿಗೆ ಟೆಂಡರ್ ಪ್ರಕ್ರಿಯೆ ಬೇಡ. ಆಯಾ ಭಾಗದಲ್ಲಿ ವಿವೇಚನೆಯಡಿ ಖರೀದಿಗೆ ಅವಕಾಶ ಕೊಡಿ. ವಿಪತ್ತು ನಿರ್ವಹಣ ನಿಧಿಯಲ್ಲಿ ಖರೀದಿಗೆ ಕ್ರಮ ಕೈಗೊಳ್ಳಿ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಖಾಲಿಯಾಗಿದೆ.
ಶಾಸಕರು ಸ್ವಂತ ಖರ್ಚಿನಲ್ಲಿ ಔಷಧಿ ಖರೀದಿಸಿ ಹಂಚುತ್ತಿದ್ದಾರೆ. ಎಲ್ಲರೂ ಹೆಚ್ಚು ದಿನ ಖರೀದಿಸಿ ಹಂಚಲು ಸಾಧ್ಯವಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿಗೂ ಔಷಧಿ ಸಿಗದೆ ಬಳಲುತ್ತಿದ್ದಾರೆ. ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ರಾಜಕೀಯ ಮಾಡಬೇಡಿ ಎಂದರು. ಕೆಲ ಸಭೆಗಳಿಗೆ ನಮ್ಮನ್ನ ಕರೆಯುತ್ತಾರೆ.
ಕೆಲ ಸಭೆಗಳಿಗೆ ಕರೆಯುವುದಿಲ್ಲ. ನಾವು ಈ ಸಂದರ್ಭದಲ್ಲಿ ಸರ್ಕಾರವನ್ನ ಟೀಕೆ ಮಾಡಲು ನಿಂತಿಲ್ಲ,ಜನರಿಗೆ ಸ್ಪಂದಿಸಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ,ಔಷಧಿಗಳ ಬಳಕೆ ವಿಚಾರದಲ್ಲಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಬೇಕು. ಕೋವಿಡ್‌ಗೆ ನಿಯಂತ್ರಣಕ್ಕೆ ಉಪಯೋಗವಾಗದ ಔಷಧಿ ಬಳಕೆ ಮಾಡಲಾಗ್ತಿದೆ. ಐವರಿಮೆಕ್ಟಲ್ ಔಷಧಿ ಬಳಸಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.
ಆದರೂ ಸರ್ಕಾರ ಆ ಔಷಧಿಯನ್ನೇ ಬಳಸುತ್ತಿದೆ. ಸರ್ಕಾರಕ್ಕೆ ಯಾವ ಔಷಧಿ ಬಳಸಬೇಕು , ಯಾವ ಔಷಧಿ ಬಳಸಬಾರದು ಎಂಬ ಕನಿಷ್ಠ ಮಾಹಿತಿ ಇಲ್ಲ. ಔಷಧಿ ಬಳಕೆ ವಿಚಾರದಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಪಡೆಯಬೇಕಿತ್ತು.
ಆದರೆ, ತಜ್ಞರ ಸಮಿತಿ ರಚಿಸದೆ ಅನುಪಯುಕ್ತ ಔಷಧಿಗಳ ಬಳಕೆ ಆಗ್ತಿದೆ. ಮುಂಬೈ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳನ್ನ ವಾರ್ ರೂಂಗಳಿಗೆ ಬಳಸಿ ಎಂದು ಸಲಹೆ ನೀಡಿದ್ರು.