ಮೈಸೂರು: ವಿಧಾನ ಪರಿಷತ್ ಸದಸ್ಯರ ಆಯ್ಕೆ ವಿಷಯವನ್ನು ಸಚಿವ ಸಂಪುಟ ಸದಸ್ಯರೆಲ್ಲರೂ ಸೇರಿ ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದೇವೆ. ಕೆಲವು ಸ್ಥಾನಗಳಿಗೆ ಚುನಾವಣೆ ಆಗಬೇಕಿದೆ. ಒಟ್ಟು 16 ಸ್ಥಾನಗಳಿಗೆ ಆಯ್ಕೆಯಾಗಬೇಕಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಚಿಕ್ಕಹೊಸೂರು ಗ್ರಾಮ ಹಾಗೂ ಸುತ್ತಲಿನ 15 ಗ್ರಾಮಗಳಿಗೆ ಕಾವೇರಿ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರಿನ ಬಿಜೆಪಿ ಪ್ರಮುಖ ನಾಯಕರು ಹಾಗೂ ಮಾಜಿ ಸಚಿವ ಹೆಚ್.ವಿಶ್ವನಾಥ್ ಸೇರಿದಂತೆ, ಎಂಟಿಬಿ ನಾಗರಾಜ್, ಜಿ.ಶಂಕರ್ ಎಲ್ಲರ ಬಗ್ಗೆಯೂ ಸ್ಥಾನ ನೀಡುವಂತೆ ನಾನು ಹಾಗೂ ಗೆಳೆಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಅವರ ನಿರ್ಧಾರವೇ ಅಂತಿಮ ಎಂದರು.
ಸಾಮಾಜಿಕ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೂ ಸ್ಥಾನ ದೊರೆಯಲಿದೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಆಯಾ ಜಿಲ್ಲೆಗಳಲ್ಲಿ ಪಕ್ಷಕ್ಕೆ ದುಡಿದವರು ಪರಿಷತ್ ಸ್ಥಾನಕ್ಕಾಗಿ ಲಾಬಿ ಮಾಡುವುದು ಸಹಜ. ಪಕ್ಷದಲ್ಲಿ ಒಂದೇ ಒಂದು ಪರ್ಸೆಂಟ್ ಸಹ ಒಡಕಿಲ್ಲ. ಮುಖ್ಯಮಂತ್ರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೇ ಅಂತಿಮವಾಗಿ ಯಾರಿಗೆ ಸ್ಥಾನ ನೀಡಬೇಕೆಂದು ನಿರ್ಧರಿಸುತ್ತಾರೆ ಎಂದರು.