ಮೈಸೂರು: ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಬಜೆಟ್ ಅಲ್ಲಿ ಕ್ರಮ ಕೈಗೊಳ್ಳುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ. ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಶಾಸನಾತ್ಮಕ ಖಾತ್ರಿ ನೀಡುವ ಬಗ್ಗೆ ಪ್ರಧಾನಿ ಅವರಿಂದ ಭರವಸೆ ಜಾರಿಯಾಗಬೇಕು. ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ ಹನಿ, ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಸಕ್ತವಾಗಿರುವ ರೈತರ ಸಾಲ ನೀತಿ ಬದಲಾಯಿಸಿ, ಕೃಷಿ ಉತ್ಪಾದನಾ ಸಾಲ ಬಡ್ಡಿ ರಹಿತ ಮಾಡಬೇಕು. ಕೃಷಿ ಭೂಮಿ ಮೌಲ್ಯದ ಶೇಕಡ 75 ರಷ್ಟು ಸಾಲ ನೀಡುವಂತೆ ನೀತಿ ರೂಪಿಸಿಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಮಾನದಂಡ ಕೈಬಿಡಬೇಕು ಎಂದು ಆಗ್ರಹಿಸಿದರು. ಹಾಗೆ ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಆಕಸ್ಮಿಕ ಬೆಂಕಿಗೆ ಸುಟ್ಟು ಹೋದ ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳು ಶೆ. 25 ರಷ್ಟು ಹಣ ಕಡಿತ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಫ್ಆರ್ಪಿ ದರ ಏರಿಕೆ ಮಾಡಬೇಕು:ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕನಿಷ್ಠ 9:5 ಕ್ಕೆ ಇಳಿಸಬೇಕು, ಕಬ್ಬು ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ಎಫ್ಆರ್ ಪಿ ದರವನ್ನು 2023-24ನೆ ಸಾಲಿಗೆ ಕನಿಷ್ಠ ಟನ್ಗೆ 3,500 ರೂ ನಿಗದಿ ಮಾಡಬೇಕು, ಕಬ್ಬಿನಿಂದ ಉತ್ಪಾದಿಸುವ ಎಥಾನಲ್ ನೀತಿ ಬದಲಾಯಿಸಿ ಮುಕ್ತ ಅವಕಾಶ ಕಲ್ಪಿಸಬೇಕು, ರೈತರ ಬೆಲ್ಲದ ಗಾಣದಲ್ಲಿ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.