ಮೈಸೂರು:ಮೈಸೂರು ದಸರಾ ಭಾರತದ ಸಂಸ್ಕೃತಿಯ ನಿದರ್ಶನವಾಗಿದೆ. ಮಹಿಷಾಸುರನ ಸಂಹಾರ ಮಾಡಿದ ಚಾಮುಂಡಿ ಮಹಿಳಾ ಶಕ್ತಿಯ ಪ್ರತೀಕವಾಗಿದ್ದಾಳೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟನಾ ಭಾಷಣದಲ್ಲಿ ಬಣ್ಣಿಸಿದರು.
ಸೋಮವಾರ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಿದರು. ಬಳಿಕ ಅವರು ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿ ಎರಡು ವಾಕ್ಯ ಹೇಳಿದರು. ಆ ನಂತರ ಸಂಸ್ಕೃತದ ಚಾಮುಂಡೇಶ್ವರಿ ಶ್ಲೋಕ ಪಠಿಸಿದರು. ಬಳಿಕ ಅವರ ಭಾಷಣವನ್ನು ಆರಂಭಿಸಿದರು.
ದೇಶಕ್ಕೆ ಕಾಳರಾತ್ರಿಯ ಶುಭ ಕೋರಿದರು. ಮೈಸೂರು ದಸರಾ ಭಾರತದ ಸಂಸ್ಕೃತಿಯ ನಿದರ್ಶನವಾಗಿದೆ. ಮಹಿಷಾಸುರನನ್ನು ಕೊಂದ ಚಾಮುಂಡಿ ನೋಡಲು ದೂರದ ಊರುಗಳಿಂದ ಜನರು ಬರುತ್ತಾರೆ. ರಾಮಯಣ, ಮಹಾಭಾರತದಲ್ಲಿ ಚಾಮುಂಡಿ ತಾಯಿಯ ಆರಾಧನೆ ಬಗ್ಗೆ ಉಲ್ಲೇಖವಿದೆ. 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಭಕ್ತಿ ಮಾರ್ಗ ತೋರಿಸಿ, ಆಧ್ಯಾತ್ಮಿಕ ಮಾರ್ಗವನ್ನು ಭೋದಿಸಿದರು. ಭಕ್ತಿ, ಸಮಾನತೆ, ಮಾನವತಾ ಸಂಸ್ಕೃತಿಗೆ ಕರ್ನಾಟಕವು ಹೆಸರುವಾಸಿಯಾಗಿದೆ ಎಂದರು.