ಮೈಸೂರು: ಕೊರೊನಾ ಪಿಡುಗಿನ ಹಿನ್ನೆಲೆ ರಾಜ್ಯದ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಸೊರಗಿವೆ. ಇನ್ನು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಮೈಸೂರಿನಲ್ಲಿ ಆರಂಭಿಸಲಾಗಿರುವ ಪಾರಂಪರಿಕ ರೈಲ್ವೆ ಮ್ಯೂಸಿಯಂಅನ್ನು ಪ್ರವಾಸಿಗರ ಅನುಕೂಲಕ್ಕಾಗಿ ಆನ್ಲೈನ್ನಲ್ಲೂ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ದೇಶದ ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿ ಒಂದಾದ ಸಾಂಸ್ಕೃತಿಕ ನಗರಿಯ ರೈಲ್ವೆ ನಿಲ್ದಾಣ ಬೆಳೆದು ಬಂದ ಇತಿಹಾಸ ಕುರಿತ ದೊಡ್ಡ ಸಂಗ್ರಹಾಲಯವೇ ಈ ಮ್ಯೂಸಿಯಂನಲ್ಲಿದೆ. ಇಲ್ಲಿ ಕೋಚ್ ಕೆಫೆ, ಆಡಿಯೋ ವಿಡಿಯೋ ದೃಶ್ಯ ಕೇಂದ್ರ ರೈಲ್ವೆ ಇತಿಹಾಸದಿಂದ ಇಲ್ಲಿಯವರೆಗಿನ ವಿವಿಧ ಬಗೆಯ ಉಗಿಬಂಡಿಗಳು, ಡ್ರ್ಯಾಗನ್ ಹಾಗೂ ದೂರ ಸಂಪರ್ಕದ ಹಳೆಯ ಉಪಕರಣಗಳು ಈ ಮ್ಯೂಸಿಯಂನಲ್ಲಿ ಇಡಲಾಗಿದೆ. ಮೈಸೂರಿನ ರಾಜ ಕುಟುಂಬದ ಪ್ರಾಚೀನ ವಸತಿ ಕೊಠಡಿಗಳು ಹಾಗೂ ಅಪರೂಪದ ಚಿತ್ರಗಳು ಇಲ್ಲಿ ಕಾಣಸಿಗುತ್ತದೆ.