ಮೈಸೂರು:ಚಿಕ್ಕಬಳ್ಳಾಪುರ ಪತ್ರಕರ್ತ ಆತ್ಮಹತ್ಯೆಗೆ ಯತ್ನಿಸಲು ಸಚಿವ ಸುಧಾಕರ್ ನೇರ ಕಾರಣ. ಹೀಗಾಗಿ ಕೂಡಲೇ ಸಚಿವರು ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಪತ್ರಕರ್ತನ ಆತ್ಮಹತ್ಯೆ ಯತ್ನಕ್ಕೆ ಕಾರಣರಾದ ಸುಧಾಕರ್ ಕೂಡಲೇ ರಾಜೀನಾಮೆ ನೀಡಬೇಕು: ಕೆಪಿಸಿಸಿ ವಕ್ತಾರ ಆಗ್ರಹ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರದ ವರ್ತನೆಗಿಂತ ಕರ್ನಾಟಕ ಸರ್ಕಾರದ ವರ್ತನೆ ಅತೀ ಕೆಟ್ಟದಾಗಿದೆ. ಬಿಜೆಪಿ ಮಂತ್ರಿಗಳ ವಿರುದ್ಧ ಯಾರಾದರೂ ದೊಡ್ಡ ವ್ಯಕ್ತಿಗಳು ಧ್ವನಿ ಎತ್ತಿದರೆ ಇಡಿ, ಐಟಿಗಳ ಮೂಲಕ ಅವರನ್ನು ಕಟ್ಟಿ ಹಾಕುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರದ ಪತ್ರಕರ್ತನಿಗೆ ಪೊಲೀಸ್ ಇಲಾಖೆ ಮೂಲಕ ತೊಂದರೆ ಕೊಡಲಾಗುತ್ತಿತ್ತು ಎಂದು ದೂರಿದರು.
ಆತ್ಮಹತ್ಯೆಗೆ ಯತ್ನಿಸುವ ಮೊದಲು ಪತ್ರಕರ್ತನೇ ಖುದ್ದು ಸಚಿವ ಸುಧಾಕರ್ ವಿರುದ್ಧ ಡೆತ್ ನೋಟ್ ಬರೆದು ಸಾಯಲು ಮುಂದಾಗಿ, ಸದ್ಯ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಸಚಿವ ಸುಧಾಕರ್ ಪೊಲೀಸರ ಮೂಲಕ ಇವರಿಗೆ ನಿರಂತರ ಕಿರುಕುಳ ನೀಡಿದ್ದು, ಇದನ್ನು ಸ್ಪಷ್ಟವಾಗಿ ಆ ಪತ್ರಕರ್ತನೇ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ದಿದ್ದರೆ ಸಚಿವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸಬೇಕಿತ್ತು. ಡೆತ್ನೋಟ್ ನಲ್ಲಿ ಸಚಿವ ಸುಧಾಕರ್ ಜೊತೆಗೆ ಅಲ್ಲಿನ ಲೋಕಲ್ ಎಸ್ಪಿ ಮಿಥುನ್, ಪಿಎಸ್ಐ ಪಾಪಣ್ಣ ಹೆಸರು ಕೂಡ ಬರೆದಿದ್ದಾರೆ. ನಮ್ಮ ರಾಜ್ಯದಲ್ಲಿ ಪತ್ರಕರ್ತರಿಗೆ ಈ ಸ್ಥಿತಿಯಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸಂಪೂರ್ಣ ತನಿಖೆಯಾಗುವವರೆಗೆ ಸಚಿವರು ರಾಜೀನಾಮೆ ನೀಡಬೇಕು. ತನಿಖೆ ನಂತರ ಬೇಕಿದ್ದರೆ ಅವರನ್ನೇ ಮುಖ್ಯಮಂತ್ರಿ ಮಾಡಿ. ಪ್ರಕರಣದ ಬಗ್ಗೆ ನಾವು ಡಿಜಿಪಿ, ಐಜಿಪಿಗೆ ದೂರು ನೀಡಿ ತನಿಖೆಗೆ ಆಗ್ರಹಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.