ಮೈಸೂರು: ಪಂಚಲಿಂಗ ದರ್ಶನಕ್ಕೆ ತಲಕಾಡು, ಬಿ.ಶೆಟ್ಟಹಳ್ಳಿ, ಹೊಳೆಸಾಲು ಗ್ರಾಮ ಪಂಚಾಯಿತಿಯ ಸ್ಥಳೀಯರೇ 35 ಸಾವಿರ ಜನ ಇರುವುದರಿಂದ ಹೊರಗಿನವರಿಗೆ ಪ್ರವೇಶ ಇರುವುದಿಲ್ಲ. ಸ್ಥಳೀಯರಿಗೂ ಸಹ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಈ ಹಿನ್ನೆಲೆ ಪಂಚಲಿಂಗ ದರ್ಶನಕ್ಕೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಪಂಚಲಿಂಗ ದರ್ಶನಕ್ಕೆ ಎರಡು ಪಾಳಿಯಲ್ಲಿ ಮಾತ್ರ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮಧ್ಯಾಹ್ನ 3 ಗಂಟೆಯೊಳಗೆ ಬಂದವರಿಗೆ ಪ್ರವೇಶಾವಕಾಶ ನೀಡಿದರೆ ಅವರು ದರ್ಶನ ಮುಗಿಸಿ ಹೊರ ಬರುವ ವೇಳೆಗೆ ಸಂಜೆಯಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಮೇರೆಗೆ ಪ್ರತಿ ದಿನ 1000 ಜನರಿಗೆ, ಡಿ. 14ರಂದು 1500 ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ವರದಿ ತರಬೇಕು ಎಂದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಭದ್ರತಾ ದೃಷ್ಟಿಯಿಂದ 9 ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅಗತ್ಯ ಇರುವ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಭಕ್ತಾದಿಗಳು ನದಿಗೆ ಇಳಿಯಬಾರದು ಎಂದು ಅವರು ಹೇಳಿದರು. ಆರೋಗ್ಯ ಇಲಾಖೆಯಿಂದ ವೈದ್ಯರನ್ನು ಒಳಗೊಂಡ 10 ತಂಡಗಳನ್ನು ನಿಯೋಜಿಸಲಾಗಿದೆ. ಎಲ್ಲಾ 5 ದೇವಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. 5 ಆಂಬುಲೆನ್ಸ್‌ಗಳು ಇರುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಮರನಾಥ್ ತಿಳಿಸಿದರು. ಅಗ್ನಿಶಾಮಕ ಇಲಾಖೆಯಿಂದ 2 ಅಗ್ನಿಶಾಮಕ ವಾಹನ, ನದಿಯಲ್ಲಿ ದೋಣಿಗಳು, ಓಬಿಎಂ ಮುಂತಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.