ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಕಲೆ, ಸಂಸ್ಕೃತಿ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದಂತೆ ಸಿಹಿ ತಿಂಡಿಯಲ್ಲಿಯೂ ತನ್ನ ಇತಿಹಾಸ ಸೃಷ್ಟಿಸಿಕೊಂಡಿದೆ. ಇತಿಹಾಸ ಸೃಷ್ಟಿಸಿದ ಸಿಹಿತಿಂಡಿಯೇ ‘ಮೈಸೂರು ಪಾಕ್’. ಮೈಸೂರು ಪಾಕ, ಮೈಸೂರು ಪೇಟ, ಮೈಸೂರು ಸಿಲ್ಕ್ ಹೀಗೆ ಮೈಸೂರು ಎಂಬ ಹೆಸರಿನಲ್ಲಿಯೇ ಪ್ರಸಿದ್ಧಿ ಪಡೆದ ಹಲವಾರು ವಿಶೇಷ ಸಾಮಾಗ್ರಿ ಹಾಗೂ ತಿನಿಸುಗಳನ್ನು ಇಂದು ನಾವು ವಿಶ್ವದೆಲ್ಲೆಡೆ ಗುರುತಿಸಬಹುದಾಗಿದೆ.
ವಿಶ್ವವಿಖ್ಯಾತಿ ಸ್ವಾದಿಷ್ಟಮಯ ಮೈಸೂರ್ ಪಾಕ್ : ಇತಿಹಾಸವೂ ಅಷ್ಟೇ ಕುತೂಹಲಕರ! ಕನ್ನಡನಾಡಿನ ಬಹು ಜನಪ್ರಿಯ ಸಿಹಿ ತಿಂಡಿ ಮೈಸೂರ್ ಪಾಕ್, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದು, ಈ ಸಿಹಿ ತಿಂಡಿ ತಯಾರಿಸಲು ಆರಂಭಿಸಿದ ಇತಿಹಾಸವು ಕೂಡ ಬಹಳ ಕುತೂಹಲಕಾರಿಯಾಗಿದೆ. 1935ರಲ್ಲಿ ಮೈಸೂರು ಅರಮನೆಯ ಪ್ರಧಾನ ಅಡುಗೆ ಭಟ್ಟರಾದ ಕಾಕಸುರ ಮಾದಪ್ಪ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಊಟಕ್ಕೆ ಅಣಿಗೊಳಿಸುತ್ತಿದ್ದ ವ್ಯಕ್ತಿ. ಮಹಾರಾಜರು ಹೊರಗಡೆ ಸುತ್ತಾಡಿ ಬರುವ ಮುನ್ನ ಇಂದು ನಾನು ಏನಾದರೂ ವಿಶೇಷ ತಿಂಡಿ ಸಿದ್ದ ಪಡಿಸಬೇಕೆಂದು ತಯಾರಿಸಿದ ಸಿಹಿತಿನಿಸೇ ಈ ಮೈಸೂರ್ ಪಾಕ್.
ಯಾವ ಸಿಹಿತಿಂಡಿ ಮಾಡಬೇಕೆಂದು ಚಿಂತೆಗೀಡಾಗಿದ ಭಟ್ಟರು, ತಲೆಗೆ ಅದೇನೊ ಹೊಳೆದು, ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಒಂದು ಪಾಕ ಪ್ರಯೋಗ ಮಾಡಿ, ಏನೋ ಮಾಡಲು ಹೋಗಿ ಇತಿಹಾಸಕ್ಕೆ ‘ಪಾಕ’ ನೀಡಿದರು. ಅರಮನೆಗೆ ಬಂದ ಮಹಾರಾಜರು ಊಟಕ್ಕೆ ಕುಳಿತರು, ದೊರೆಗೆ ಪಾಕವನ್ನ ಅಳುಕಿನಿಂದಲೇ ಮುಂದಿಟ್ಟರು ಮಾದಪ್ಪ. ಸಿಹಿತಿಂಡಿಯನ್ನ ಚಪ್ಪರಿಸಿದ ಮಹಾರಾಜರು ಇದೇನಿದು ಹೊಸ ರುಚಿ ಇಷ್ಟೊಂದು ಸ್ವಾದಿಷ್ಟವಾಗಿದೆ, ಇದರ ಹೆಸರೇನು ಎಂದರಂತೆ. ತಬ್ಬಿಬ್ಬಾದ ಮಾದಪ್ಪನವರು ಸಿಹಿತಿಂಡಿಯ ಹೆಸರು ನನಗೂ ಕೂಡ ತಿಳಿದಿಲ್ಲವೆಂದು ತಲೆ ಅಲ್ಲಾಡಿಸಿದರು. ಆಗ ತಿಂಡಿಯನ್ನು ಹೇಗೆ ಮಾಡಿದ ಎಂದು ಮತ್ತೆ ಮಹಾರಾಜರು ಪ್ರಶ್ನೆ ಮಾಡಿದರು.
ಅದಕ್ಕೆ ಭಟ್ಟರು ‘ಪಾಕ’ದಿಂದ ಮಾಡಿದ್ದು ಎಂದು ಮೆಲುಧ್ವನಿಯಿಲ್ಲಿ ಹೇಳಿದರು. ಈ ಮಾತಿನಿಂದ ಹರ್ಷರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇದಕ್ಕೆ ಮೈಸೂರು ಎಂದು ಹೆಸರು ಸೇರಿಸೋಣವೆಂದರು. ಅಂದಿನ ‘ಮೈಸೂರುಪಾಕ’ ಇಂದು ‘ಮೈಸೂರ್ ಪಾಕ್’ ಆಗಿದೆ. ಅರಮನೆಯಲ್ಲಿ ಹುಟ್ಟಿದ ಈ ಸಿಹಿತಿಂಡಿ ಶುಭ ಸಮಾರಂಭಗಳಿಗೂ ಕಾಲಿಟ್ಟು, ಇಂದು ವಿಶ್ವವಿಖ್ಯಾತಿ ಪಡೆದಿದೆ.