ಮೈಸೂರು: ಕೊರೊನಾ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೊದಲು ಜನರ ಪ್ರಾಣ ಉಳಿಸಿ ಎಂದು ಘೋಷಣೆ ಕೂಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ.. ನಗರದ ಜಯಚಾಮರಾಜ ಒಡೆಯರ್ ವೃತ್ತದ ಬಳಿ ಏಕಾಂಗಿಯಾಗಿ ಕುಳಿತು ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಬಂದಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು. ಆದರೆ, ಅವರ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಆಸ್ಪತ್ರೆ ನರಕ ಹಾಗೂ ಯಮಲೋಕ ಎಂದು ಕಿಡಿಕಾರಿದರು. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಆ್ಯಂಬುಲೆನ್ಸ್ ಇಲ್ಲ, ಅಲ್ಲೊಂದು ಇಲ್ಲೊಂದು ಎನ್ನುವಂತೆ ಆ್ಯಂಬುಲೆನ್ಸ್ ಓಡಾಡುತ್ತೆ. ಕೊರೊನಾ ವಿಚಾರವಾಗಿ ಸರ್ಕಾರ ಸರಿಯಾದ ಭದ್ರತೆ ಮಾಡಿಲ್ಲ. ಸಚಿವ ಬೊಮ್ಮಾಯಿ, ಅಶೋಕ್, ಸುಧಾಕರ್ ಮಾತ್ರ ಕಾಣಿಸಿಕೊಳ್ತಿದ್ದಾರೆ. ಉಳಿದವರು ಎಲ್ಲಿ ಹೋದರು? ಎಂದು ಪ್ರಶ್ನಿಸಿದರು.
ಕೊರೊನಾ ಸಂದರ್ಭದಲ್ಲಿ ಶಾಸಕರು, ಸಂಸದರು ಒಂದೊಂದು ಭಾಗ ವಹಿಸಿಕೊಂಡು ಕೆಲಸ ಮಾಡಬೇಕು. ರಾಜ್ಯದಲ್ಲಿ ಕೋವಿಡ್ ಸಂಬಂಧಿತ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅಸಮಾಧಾನ ಹೊರ ಹಾಕಿದರು. ಮೃತದೇಹ ಸುಡೋದಕ್ಕೂ ಜಾಗವಿಲ್ಲ. ಆರೋಗ್ಯ ಸಚಿವರು ಬೇಜವಾಬ್ದಾರಿಯಿಂದ ಮಾತಾಡುತ್ತಾರೆ. ಸದ್ಯ ಲಾಕ್‌ಡೌನ್ ಬೇಡ, ಮಾಡಿದ್ರೆ ಜನರಿಗೆ ಸಮಸ್ಯೆ ಆಗುತ್ತೆ. ಮೊದಲು ಬಾರ್, ಮಾಲ್ಗಳನ್ನು ಬಂದ್ ಮಾಡಿ ಎಂದು ಹೇಳಿದರು.
ವಿರೋಧ ಪಕ್ಷದವರು ಸುಮ್ಮನೆ ಕೂರೋದಲ್ಲ, ಅವರಿಗೆ ಜವಾಬ್ದಾರಿ ಹೆಚ್ಚಿದೆ. ಅವರು ಸೇರಿ ಕೊರೊನಾ ಓಡಿಸಲು ಪಕ್ಷಾತೀತವಾಗಿ ಬಂದಾಗಬೇಕು. ಬಡವರಿಗೆ ಸರಿಯಾದ ಬೆಡ್ ಸಿಗ್ತಿಲ್ಲ, ದುಡ್ಡಿದ್ದವರಿಗೆ ಮಾತ್ರ ಬೆಡ್ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸೀಟಿ ಹೊಡೆದು ಕೊರೊನಾ ಜಾಗೃತಿ ಮೂಡಿಸಿದ ಡಿಸಿ.. ಇಂದಿನಿಂದ ಸುರಕ್ಷಾ ಪಡೆಯ 65 ಮಂದಿ ಕಾರ್ಯಾಚರಣೆ
ಕುಮಾರಸ್ವಾಮಿಗೆ ಎರಡು ಆಸ್ಪತ್ರೆ ರಿಸರ್ವ್ ಮಾಡಿದ್ದೇವೆ ಅಂತಾರೆ. ಹಾಗಾದರೆ, ಬಡವರ ಕಥೆ ಏನು? ನೀವು ಲಾಕ್‌ಡೌನ್ ಮಾಡಿದ್ರೆ ಲಾಕ್‌ಡೌನ್ ಧಿಕ್ಕರಿಸುತ್ತೇವೆ ಎಂದರು. ಪ್ರಚಾರಕ್ಕೆ ಹೋಗಿ ಕೊರೊನಾ ಬಂದ ಎಲ್ಲ ರಾಜಕಾರಣಿಗಳು ಗುಣಮುಖವಾಗಲಿ. ಆದರೆ, ಲಾಕ್‌ಡೌನ್ ಯಾವುದೇ ಕಾರಣಕ್ಕೂ ಬೇಡ ಎಂದರು.