ಮೈಸೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸ್ಕಾಲ್ ಇಂಡಿಯಾ ಇಂಟರ್‌ನ್ಯಾಷನಲ್ ವತಿಯಿಂದ ಅಕ್ಟೋಬರ್ 4ರಿಂದ 8ರ ವರೆಗೆ ನಡೆಯಲಿರುವ ಸ್ಕಾಲ್ ಇಂಡಿಯಾ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಆಸ್ಕರ್ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್ʼ ಖ್ಯಾತಿಯ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯನ್ನು ರಾಯಭಾರಿಗಳಾಗಿ ಘೋಷಣೆ ಮಾಡಲಾಯಿತು.
ಇತ್ತೀಚೆಗೆ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಮನೆಗೆ ಭೇಟಿ ನೀಡಿದ ಸ್ಕಾಲ್ ಇಂಡಿಯಾ ಕಾಂಗ್ರೆಸ್ ತಂಡವು ಕಾರ್ಯಕ್ರಮದ ರಾಯಭಾರಿಗಳಾಗಲು ಕೋರಿದರು. ಇಬ್ಬರು ಖುಷಿಯಿಂದ ಒಪ್ಪಿಗೆ ನೀಡಿದ್ದು ಮಾತ್ರವಲ್ಲದೇ ಅಕ್ಟೋಬರ್ 4ರಂದು ಮೈಸೂರಿನಲ್ಲಿ ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಗೂ ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಆಗಮಿಸುವುದಕ್ಕೆ ಒಪ್ಪಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಬೊಮ್ಮನ್ ಅವರು, ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ಮೂಲ ಉದ್ದೇಶದ ಪ್ರವಾಸೋದ್ಯಮದ ಸುಸ್ಥಿರ ಅಭಿವೃದ್ಧಿ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ನಮ್ಮ ದೇಶದ ನೈಸರ್ಗಿಕ ಸಂಪತ್ತು ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ನಮ್ಮ ನೈಸರ್ಗಿಕ ಸಂಪತ್ತು ಉಳಿಯಬೇಕು ಎಂದರೆ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮ ಅತ್ಯಗತ್ಯ. ಈ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.
ಇದೇ ವೇಳೆ ಸ್ಕಾಲ್‌ನ ಸದಸ್ಯರು ಮಾತನಾಡಿ, ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿ, ನಮ್ಮ ಭೂಮಿಯ ರಕ್ಷಣೆ ಹಾಗೂ ಮೌಲಿಕ ಲಾಭ ಸಂಪಾದನೆಯನ್ನು ಉತ್ತೇಜಿಸುವುದು ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ನಮ್ಮ ಮಣ್ಣಿನವರು, ಪ್ರಕೃತಿಗೆ ಆಪ್ತವಾಗಿರುವವರು ರಾಯಭಾರಿಗಳಾಗಬೇಕಿತ್ತು. ಇದಕ್ಕೆ ಬೊಮ್ಮನ್ ಹಾಗೂ ಬೆಳ್ಳಿವರಿಗಿಂತ ಮತ್ಯಾರೂ ಸೂಕ್ತರಲ್ಲ ಎನಿಸಿದಾಗ ಅವರೊಂದಿಗೆ ಮಾತನಾಡಿದೆವು. ನಮ್ಮ ಕಾರ್ಯಕ್ರಮದ ರಾಯಭಾರಿಗಳಾಗಲು ಅವರು ಖುಷಿಯಿಂದ ಒಪ್ಪಿದ್ದಾರೆ. ಇದಲ್ಲದೇ ನಮ್ಮ ಕಾರ್ಯಕ್ರಮದ ಲಾಂಛನ ಆನೆ. ಆನೆಯೊಂದಿಗೆ ಬೊಮ್ಮನ್ ಹಾಗೂ ಬೆಳ್ಳಿಗೆ ಇರುವ ಆತ್ಮೀಯತೆ ಇಡೀ ಜಗತ್ತಿಗೆ ತಿಳಿದಿದೆ. ಇದು ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಾಮರಸ್ಯದ ಸಂಕೇತ. ಈ ಎಲ್ಲ ಕಾರಣಗಳಿಂದ ಇವರಿಬ್ಬರೂ ಸ್ಕಾಲ್ ಇಂಡಿಯಾ ಕಾಂಗ್ರೆಸ್‌ನ ರಾಯಭಾರಿಗಳಾಗಿದ್ದಾರೆ ಎಂದು ವಿವರಿಸಿದರು.