ಮೈಸೂರು: ಕೋವಿಡ್ ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕಾರಣ ಮೈಸೂರಿನಲ್ಲಿ ಕೋವಿಡ್ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಇಂದು ಕೋವಿಡ್ ನಿಯಂತ್ರಣ ಕುರಿತು ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮೈಸೂರಿನಲ್ಲಿ ಏಪ್ರಿಲ್ 1 ರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.
ಜೊತೆಗೆ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಯಿತು. ಇಡೀ ರಾಜ್ಯದಲ್ಲಿ ಲಸಿಕೆ ನೀಡುವುದರಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದ್ದು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಸಹ ಲಸಿಕೆ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆ ಮೈಸೂರು ಜಿಲ್ಲೆಗೆ 21 ಲಕ್ಷ ಜನರಿಗೆ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ ಎಂದರು.
ಮೈಸೂರಲ್ಲಿ ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ಏರಿಕೆಗೆ ಕಾರಣ ತಿಳಿಸಿದ ಸಚಿವರು ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಹಕರಿಸಿ
ಈಗಾಗಲೇ 7 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದ್ದು, ಉಳಿದವರಿಗೂ ಶೀಘ್ರದಲ್ಲೇ ಲಸಿಕೆಯನ್ನು ಹಾಕುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಜನರು ಮುಂದಿನ ಕೋವಿಡ್ ಅಲೆ ಬರದಂತೆ ತಡೆಯಲು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಔಷಧಿ ಹಾಗೂ ಆಕ್ಸಿಜನ್ ಕೊರತೆಯಾಗದ ರೀತಿಯಲ್ಲಿ ನೋಡಿಕೊಳ್ಳಲು ಕಂಟ್ರೋಲ್ ರೂಂ ಅನ್ನು ತೆರೆಯಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ಕೊರೊನಾ ತಡೆಯುವ ನಿಟ್ಟಿನಲ್ಲಿ ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂದು ಹೇಳಿದ ಸಚಿವರು, ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆದೇಶದಂತೆ ಬೆಡ್ಗಳನ್ನು ಮೀಸಲು ಇಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಇದು ಏಕಾಏಕಿ ನಿರ್ಧಾರವಲ್ಲ
ರಾಜ್ಯ ಸರ್ಕಾರ ಅತ್ಯಂತ ಸೂಕ್ತವಾದ ಕೋವಿಡ್ ಮಾರ್ಗಸೂಚಿ ರೂಪಿಸಿದೆ. ಆದರೆ ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ನಿಯಮಪಾಲನೆಗೆ ಜನರು ಸಹಕರಿಸಬೇಕು. ಸರ್ಕಾರಕ್ಕೆ ಜೀವನಕ್ಕಿಂತ ಜೀವ ಮುಖ್ಯ ಎಂಬ ಚಿಂತನೆ ಇದೆ. ಕೂಲಿ ಕಾರ್ಮಿಕರು, ಕೃಷಿ ಚಟುವಟಿಕೆ, ಕೈಗಾರಿಕೆ, ಕಚೇರಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆ ಮಾಡಿಲ್ಲ. ಗುಂಪುಗೂಡುವುದನ್ನು ಹಾಗೂ ಸಾಂಕ್ರಾಮಿಕ ಹರಡಲು ಕಾರಣವಾಗುವ ಚಟುವಟಿಕೆಗಳನ್ನು ಮಾತ್ರ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮರಣ ಪ್ರಮಾಣ ಶೇ.4 ರಷ್ಟಿದೆ. ಬಹುಪಾಲು ಮರಣಗಳು ರೋಗಿಗಳು ತಡವಾಗಿ ಆಸ್ಪತ್ರೆಗೆ ಬಂದಿರುವುದರಿಂದ ಸಂಭವಿಸಿದೆ. ಹೃದಯ ಸಮಸ್ಯೆ ಮೊದಲಾದ ಬೇರೆ ಸಮಸ್ಯೆಗಳಿಂದಲೂ ಸಾವಾಗಿದೆ. ಸಾವಿನ ಆಡಿಟ್ ಮಾಡುತ್ತಿದ್ದು, ನಿಖರ ಕಾರಣದ ಬಗ್ಗೆ ವರದಿ ಬಂದಿದೆ. ಮೈಸೂರಿನಲ್ಲಿ ಆರೋಗ್ಯ ಸೌಲಭ್ಯಗಳು ಉತ್ತಮವಾಗಿದ್ದು, ಮರಣ ಪ್ರಮಾಣ ನಿಯಂತ್ರಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಒಂದೆರಡು ಆಸ್ಪತ್ರೆಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಡಿ ಇರಲಿಲ್ಲ. ಈಗ ಮತ್ತೆ ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ. ಶೇ.50ರಷ್ಟು ಹಾಸಿಗೆ ಕೋವಿಡ್‍ಗೆ ಮೀಸಲಿಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ಕೊಡದಿದ್ದರೆ ಸರ್ಕಾರವೇ ಪಡೆಯಲಿದೆ ಎಂದು ಸಚಿವರು ತಿಳಿಸಿದರು.