ಮೈಸೂರು :ನಾಳೆ ಬೆಳಗ್ಗೆ 10:15 ರಿಂದ 10:30 ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಇದಕ್ಕಾಗಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಸಿದ್ಧಮಾಡಲಾಗಿದೆ.
ಅಕ್ಟೋಬರ್ 15 ರಂದು ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಲಾಗಿರುವ ವಿಶೇಷ ಉದ್ಘಾಟನಾ ಸಮಾರಂಭದಲ್ಲಿ ಬೆಳ್ಳಿಯ ಪಲ್ಲಕ್ಕಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪನೆ ಮಾಡಿ, ಹಂಸಲೇಖ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಬೆಳಗ್ಗೆ 10:15 ರಿಂದ 10:30 ರಲ್ಲಿ ಜರುಗುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ದಸರಾಗೆ ಚಾಲನೆ ನೀಡಲಾಗುವುದು. ಇದಕ್ಕಾಗಿ ಅರಮನೆಯಿಂದ ತಂದ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಸ್ವಚ್ಛಗೊಳಿಸಿ ನಾಳಿನ ಉದ್ಘಾಟನಾ ಸಮಾರಂಭಕ್ಕೆ ಸಿದ್ಧಗೊಳಿಸಲಾಗಿದೆ. 9 ದಿನಗಳು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.
ಉದ್ಘಾಟನೆಗೆ ವೇದಿಕೆ ಸಿದ್ಧ : ಈ ಬಾರಿಯ ಸಾಂಪ್ರದಾಯಿಕ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಅಕ್ಟೋಬರ್ 15 ರ ಭಾನುವಾರ ಬೆಳಗ್ಗೆ ಚಾಮುಂಡಿ ಬೆಟ್ಟದ ದೇವಾಲಯದ ಪಕ್ಕ ನಿರ್ಮಾಣವಾಗುತ್ತಿರುವ ವೇದಿಕೆಯಲ್ಲಿ ಹಂಸಲೇಖ ಅವರು ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಲಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಸಹ ಮಾಡಲಾಗಿದೆ.
ಇದನ್ನೂ ಓದಿ :ಎರಡನೇ ಹಂತದ ಕುಶಾಲತೋಪು ಸಿಡಿಮದ್ದು ಯಶಸ್ವಿ : 5 ಆನೆಗಳು ಗೈರು - ರಂಪಾಟ ಮಾಡಿದ ಕುದುರೆ