ಮೈಸೂರು: ಇಬ್ಬರು ಇನ್ನೇನು ದಾಂಪತ್ಯಕ್ಕೆ ಕಾಲಿಟ್ಟು, ಸುಖ ಸಂಸಾರ ನಡೆಸಬೇಕೆನ್ನುವ ಕನಸು ಕಂಡಿದ್ದರು. ವಿವಾಹಕ್ಕೂ ಮುನ್ನ ಸವಿನೆನಪಿಗಾಗಿ ತಲಕಾಡಿನ ಮುಡುಕುತೊರೆ ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ನವಜೋಡಿ ದುರಂತ ಅಂತ್ಯ ಕಂಡಿದ್ದಾರೆ.
ನವ ಜೋಡಿಯ ಸಾವಿಗೆ ಕಾರಣ ಬಹಿರಂಗ ಕ್ಯಾತಮಾರನಹಳ್ಳಿಯ ನಿವಾಸಿ ರತ್ನಮ್ಮ ಹಾಗೂ ಶಿವಣ್ಣ ದಂಪತಿ ಪುತ್ರ ಚಂದ್ರು, ಮತ್ತು ಸವಿತಾ ಹಾಗೂ ನಾಗೇಶ್ ದಂಪತಿಯ ಪುತ್ರಿ ಶಶಿಕಲಾಗೆ ಕಳೆದ ವರ್ಷ ನಿಶ್ಚಿತಾರ್ಥವಾಗಿತ್ತು. ಆದರೆ, ಕಾರಣಾಂತರಗಳಿಂದ ಮದುವೆಯನ್ನು ಮುಂದೂಡಲಾಗಿತ್ತು.
ಚಂದ್ರು ಹಾಗೂ ಶಶಿಕಲಾಳಿಗೆ ನವೆಂಬರ್ 22ರಂದು ಕಲ್ಯಾಣ ಮಂಟಪವೊಂದರಲ್ಲಿ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಮದುವೆ ಆಹ್ವಾನ ಪತ್ರಿಕೆಯನ್ನು ಕೂಡ ಮುದ್ರಿಸಿ ಮನೆಯಲ್ಲಿ ಇಡಲಾಗಿತ್ತು. ಮದುವೆ ಇನ್ನೊಂದು ವಾರ ಎನ್ನುವಾಗ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಿದರಾಯ್ತು ಎಂದು ಎರಡು ಕುಟುಂಬದವರು ತೀರ್ಮಾನಿಸಿದ್ದರು.
ಇದನ್ನೂ ಓದಿ: ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ದುರಂತ: ಮದುವೆಗೂ ಮುನ್ನ ಮಸಣ ಸೇರಿದ ವಧು-ವರ
ಹುಡುಗಿಗೆ ಫೋಟೋ ಮೋಹ: ಚಂದ್ರು ಜೊತೆ ವಿವಾಹ ನಿಶ್ಚಿಯವಾಗಿದ್ದ ಶಶಿಕಲಾ 8ನೇ ತರಗತಿ ಓದಿದ್ದು, ಒಬ್ಬಳೇ ಮಗಳೆಂದು ಮುದ್ದಿನಿಂದ ಬೆಳೆಸಿದ್ದರು. ಆದರೆ, ಈಕೆಗೆ ಬಾಲ್ಯದಿಂದಲೂ ಫೋಟೋಗಳ ಮೇಲೆ ಅಪಾರ ಪ್ರೀತಿ. ಎಲ್ಲೇ ಹೋದರು ಫೋಟೋ ತೆಗೆಸಿಕೊಂಡೇ ಮನೆಗೆ ಬರುತ್ತಿದ್ದಳು. ನಿನ್ನೆ(ಸೋಮವಾರ) ಫೋಟೋ ಶೂಟ್ ಮಾಡಿಸಿಕೊಳ್ಳಲು ಚಂದ್ರುವಿನ ಬಟ್ಟೆಯನ್ನು ಚಾಯ್ಸ್ ಮಾಡಿದ್ದು ಕೂಡ ಶಶಿಕಲಾನೆ. ತಲಕಾಡಿನ ಮುಡುಕುತೊರೆಗೆ ಹೋಗುವ ಮುನ್ನ ಕೆಲವು ಪ್ರದೇಶಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು, ಅಂತಿಮ ಫೋಟೋ ನೀರಿನಲ್ಲಿ ತೆಗೆಸಿಕೊಳ್ಳಬೇಕೆಂಬ ಮಹಾದಾಸೆಯಿಂದ ಹೋದ ಜೋಡಿಗಳಿಗೆ ನೀರಿನ ಸುಳಿ ಸಾವಿನ ದಾರಿ ತೋರಿಸಿತು.
ಸಾವನ್ನಪ್ಪಿರುವ ಜೋಡಿಯನ್ನು ನೋಡಿ ಸಂಬಂಧಿಗಳ ಹಾಗೂ ಸ್ನೇಹಿತರಲ್ಲಿ ದು:ಖ ಮಡುಗಟ್ಟಿದೆ. ಪ್ರೀತಿಯಿಂದ ಬಾಳಿ ಎಂದು ಹಾರೈಸಬೇಕಿದ್ದ ಕೈಗಳಿಂದಲೇ ಅವರಿಗೆ ಮಣ್ಣು ಹಾಕುವಂತಾಯಿತಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ.
ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರುವ ಶಶಿಕಲಾ ಹಾಗೂ ಚಂದ್ರು ಮೃತದೇಹ ನೋಡಲು ಸಂಬಂಧಿಗಳ ದಂಡು ಹರಿದು ಬಂದಿದೆ. ಮೃತರಿಗೆ ಕಂಕಣಕಟ್ಟಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಒಟ್ಟಾರೆ ಈ ಫೋಟೋ ವ್ಯಾಮೋಹ ಒಂದು ಸುಂದರ ಜೋಡಿಯ ಬದುಕನ್ನೇ ಮಣ್ಣಾಗಿಸಿದೆ.