ಮೈಸೂರು: ಗಿರಿಜನರಿಗೆ ಉಚಿತವಾಗಿ ನೀಡಬೇಕಿದ್ದ ಆಹಾರ ಪದಾರ್ಥಗಳನ್ನು ಶಾಲೆಯ ಮೇಲ್ವಿಚಾರಕನೊಬ್ಬ ಕದ್ದೊಯ್ಯುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಗಿರಿ ಜನರಿಗೆ ನೀಡಬೇಕಿದ್ದ ಆಹಾರ ಸಾಮಗ್ರಿ ಕದಿಯಲು ಯತ್ನ ಆರೋಪ... ಶಾಲೆಯ ಮೇಲ್ವಿಚಾರಕ ಅಂದರ್
ಶಾಲೆಯ ಮೇಲ್ವಿಚಾರಕನೊಬ್ಬ ಲಾಕ್ಡೌನ್ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಗಿರಿ ಜನರಿಗೆ ಹಂಚಲು ಸರ್ಕಾರ ಕೊಟ್ಟಿದ್ದ ಆಹಾರ ಸಾಮಗ್ರಿಗಳನ್ನು ಕದಿಯಲು ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪಿರಿಯಾಪಟ್ಟಣ ತಾಲೂಕಿನ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಣಿಗೇಟ್ ಗ್ರಾಮದಲ್ಲಿರುವ ಗಿರಿಜನ ಆಶ್ರಯ ಶಾಲೆಯಲ್ಲಿ ಗಿರಿಜನರಿಗೆ ಹಾಗೂ ಬಡವರಿಗೆ ವಿತರಿಸಲು ಆಹಾರ ಧಾನ್ಯಗಳ ಕಿಟ್ಅನ್ನು ಸರ್ಕಾರ ನೀಡಿತ್ತು. ಆದ್ರೆ ಜನರಿಗೆ ನೀಡಬೇಕಾದ ಈ ಕಿಟ್ನ್ನು ಶಾಲೆಯ ಮೇಲ್ವಿಚಾರಕ ಮೋಹನ್ ಎಂಬಾತ ಕಾರಿನಲ್ಲಿ ಕದ್ದು ಸಾಗಿಸುತ್ತಿರುವಾಗ ಸ್ಥಳೀಯ ಗಿರಿಜನರೇ ರೆಡ್ಹ್ಯಾಂಡ್ ಆಗಿ ಹಿಡಿದು ಬೈಲಕೊಪ್ಪ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಬಗ್ಗೆ ವಿವರಿಸಿದ ಸ್ಥಳೀಯ ಶಾಂತರಾಜ್, ಸರ್ಕಾರದಿಂದ ಬಂದ ದಿನಸಿ ಪದಾರ್ಥಗಳನ್ನು 512 ಕುಟುಂಬಗಳಿಗೆ ವಿತರಿಸಲಾಗಿತ್ತು. ಉಳಿದ ಪದಾರ್ಥಗಳನ್ನು ವಿತರಿಸುವ ಕೆಲಸ ಈ ಮೇಲ್ವಿಚಾರಕ ಮೋಹನ್ ಅವರದ್ದೇ ಆಗಿತ್ತು. ಆದರೆ ಮೋಹನ್ ಸರ್ಕಾರ ನೀಡಿದ್ದ ಮೊಟ್ಟೆ, ಅಕ್ಕಿ, ತುಪ್ಪವನ್ನು ಕಳ್ಳತನದಿಂದ ಮಾರಾಟ ಮಾಡುವುದು ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.