ಕರ್ನಾಟಕ

karnataka

ETV Bharat / state

ಗುರುಗಳು ಹೇಳಿಕೊಟ್ಟಿದ್ದನ್ನು ಸರಿಯಾಗಿ ಅಭ್ಯಾಸಿಸಬೇಕು‌: ಗಣಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಸಲಹೆ - ದ್ವಿತೀಯ ಪಿಯುಸಿ ಬೋರ್ಡ್​ ಪರೀಕ್ಷೆ

ಓದಿದ್ದು ನೆನಪಿನಲ್ಲಿ ಉಳಿಯಬೇಕು ಎಂದರೆ ಅವರು ನೋಡದೆ ಬರೆಯಬೇಕು. ನಂತರ ಅದನ್ನು ಅವರೇ ಕರೆಕ್ಷನ್ ಮಾಡಿಕೊಳ್ಳಬೇಕು. ಹೀಗೆ ಮಾಡಿದಾಗ ಓದಿರುವುದು ನೆನಪಿನಲ್ಲಿ ಉಳಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಗಣಿತ ಶಿಕ್ಷಕರಾದ ಎ. ಅನಿಲ್​ ಕುಮಾರ್ ಸಲಹೆ ನೀಡಿದ್ದಾರೆ.

ಎ. ಅನಿಲ್​ ಕುಮಾರ್
ಎ. ಅನಿಲ್​ ಕುಮಾರ್

By

Published : Apr 19, 2022, 8:15 PM IST

ಮೈಸೂರು: ಏಪ್ರಿಲ್ 22 ರಿಂದ ಕರ್ನಾಟಕದಲ್ಲಿ ಪಿಯುಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಹಾಗೂ ಪರೀಕ್ಷೆ ಹೇಗೆ ಬರೆಯಬೇಕು ಎಂಬುದರ ಬಗ್ಗೆ ನುರಿತ ಗಣಿತ ಶಿಕ್ಷಕರಾದ ಎ. ಅನಿಲ್ ಕುಮಾರ್ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿ ಕೆಲವು ಟಿಪ್ಸ್ ನೀಡಿದ್ದಾರೆ.


ಕಳೆದೆರಡು ವರ್ಷಗಳಿಂದ ಕೋವಿಡ್​ ವೈರಸ್​ನಿಂದ ವಿದ್ಯಾರ್ಥಿಗಳು ಕಷ್ಟವನ್ನು ಅನುಭವಿಸಿದ್ದಾರೆ. ಸರಿಯಾಗಿ ಕ್ಲಾಸ್​ಗಳು ನಡೆದಿಲ್ಲ. ಆನ್​ಲೈನ್ ಕ್ಲಾಸ್​ಗಳು ನಡೆದಿವೆ. ಜೊತೆಗೆ ಪರೀಕ್ಷೆ ಬರೆಯದೆ ಅವರನ್ನು ಪಾಸ್ ಮಾಡಲಾಗಿದೆ. ಹಾಗಾಗಿ, ಅವರಿಗೆ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ. ಹಾಗಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಜೊತೆಗೆ ಓದಿದ್ದು ನೆನಪಿನಲ್ಲಿ ಉಳಿಯಬೇಕು ಎಂದರೆ ಅವರು ನೋಡದೆ ಬರೆಯಬೇಕು. ನಂತರ ಅದನ್ನು ಅವರೇ ಕರೆಕ್ಷನ್ ಮಾಡಿಕೊಳ್ಳಬೇಕು. ಹೀಗೆ ಮಾಡಿದಾಗ ಓದಿರುವುದು ನೆನಪಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವುದು ಹಾಗೂ ಬರೆಯುವುದನ್ನು ಅಭ್ಯಾಸ ಮಾಡಬೇಕು. ಜೊತೆಗೆ ಹಳೆಯ ವರ್ಷಗಳ ಪ್ರಶ್ನಾ ಪತ್ರಿಕೆ ಹಾಗೂ ಬ್ಲೂ ಪ್ರಿಂಟ್ ಇಟ್ಟುಕೊಂಡು ಅಭ್ಯಾಸ ಮಾಡಬೇಕು. ಆಗ ಯಾವುದು ಮುಖ್ಯ, ಯಾವುದು ಪರೀಕ್ಷೆಗೆ ಬರುತ್ತದೆ ಎಂಬುದು ತಿಳಿಯುತ್ತದೆ.

ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಶಾಂತವಾಗಿರಬೇಕು. ಹೆಚ್ಚು ಒತ್ತಡ ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳು ಆಟ ಆಡಿದರೆ, ಯೋಗ ಮಾಡಿದರೆ, ವ್ಯಾಯಾಮ, ಮನೆಯವರೊಂದಿಗೆ ಕಾಲ ಕಳೆಯುವುದು ಇಲ್ಲ ಮನೆಯಿಂದ ಸ್ವಲ್ಪ ಸಮಯ ಹೊರಗೆ ಹೋಗಿ ಬರುವುದು ಈ ರೀತಿಯ ಚಟುವಟಿಕೆಗಳನ್ನು ಮಾಡುವುದರಿಂದ ಮನಸ್ಸಿಗೆ ಚೈತನ್ಯ ಮೂಡುತ್ತದೆ. ಜೊತೆಗೆ ಓದಲು ಏಕಾಗ್ರತೆ ಬರುತ್ತದೆ. ಹಾಗಾಗಿ, ದಿನದಲ್ಲಿ ಸ್ವಲ್ಪ ಸಮಯ ಈ ರೀತಿಯ ಚಟುವಟಿಕೆಗಳನ್ನು ಮಾಡುವುದರಿಂದ ಓದಲು ಏಕಾಗ್ರತೆ ಮೂಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸ್ವಲ್ಪ ಸಮಯ ಇದನ್ನು ಮಾಡಬೇಕು.

ಆರೋಗ್ಯದ ಬಗ್ಗೆ ಗಮನ ನೀಡಬೇಕು:ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಬಹಳ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಹೊರಗಿನ ಆಹಾರವನ್ನು ಕಡಿಮೆ ಮಾಡಬೇಕು. ಜಂಕ್ ಪುಡ್​ಗಳನ್ನು ತಿನ್ನಬಾರದು‌. ಜೊತೆಗೆ ಈಗ ಬೇಸಿಗೆಯಾಗಿರುವುದರಿಂದ ಹಣ್ಣಿನ ಜ್ಯೂಸ್, ಮಜ್ಜಿಗೆ ಜೊತೆಗೆ ನೀರನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುವುದು ಬಹಳ ಒಳ್ಳೆಯದು. ಮನೆಯಲ್ಲಿ ಅಪ್ಪ ಅಮ್ಮ ಮಕ್ಕಳ ಓದಿನ ಬಗ್ಗೆ ಗಮನಹರಿಸಬೇಕು. ಅವರು ಏನು ಮಾಡುತ್ತಿದ್ದಾರೆ. ಹೇಗೆ ಓದುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಸಮಯದ ಸದ್ಬಳಕೆ ಹೇಗೆ?ಪರೀಕ್ಷೆಯಲ್ಲಿ ಮೊದಲು 15 ನಿಮಿಷ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಓದಲು ಸಮಯವಿರುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮಗೆ ಗೊತ್ತಿರುವ ಪ್ರಶ್ನೆಗಳಿಗೆ ಟಿಕ್ ಮಾಡಿಕೊಳ್ಳಬೇಕು. ಆದರೆ, ಪ್ರಶ್ನೆ ಪತ್ರಿಕೆ ಮೇಲೆ ಉತ್ತರ ಬರೆಯಬಾರದು. ನಂತರ ಉತ್ತರ ಪತ್ರಿಕೆಯಲ್ಲಿ ತಮಗೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಪ್ರಶ್ನೆ ಇರುವ ಆರ್ಡರ್​ನಲ್ಲಿ ಉತ್ತರ ಬರೆಯಬೇಕು ಅಂತ ನಿಯಮವಿಲ್ಲ.

ಹಾಗಾಗಿ, ಮೊದಲು ತಮಗೆ ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ನಂತರ ಉಳಿದಿರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು.‌ 3 ಗಂಟೆ ಪರೀಕ್ಷೆ ಅವಧಿ ಮುಗಿಯುವವರೆಗೂ ಎದ್ದು ಹೋಗಬಾರದು. ಆದಷ್ಟು ನೆನಪು ಮಾಡಿಕೊಂಡು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು.

ಗುರುಗಳು ಹೇಳಿಕೊಟ್ಟಿದ್ದನ್ನು ಸರಿಯಾಗಿ ಅಭ್ಯಸಿಸಬೇಕು‌:ಕಾಲೇಜು ಹಾಗೂ ಕೋಚಿಂಗ್ ಸೆಂಟರ್​ಗಳಲ್ಲಿ ಪ್ರಿಪರೇಟರಿ ಪರೀಕ್ಷೆ ಮಾಡಿರುತ್ತಾರೆ. ಅದೇ ರೀತಿ ವಾರ್ಷಿಕ ಪರೀಕ್ಷೆ ಕೂಡ. ಹಾಗಾಗಿ ಪ್ರಿಪರೇಟರಿ ಪರೀಕ್ಷೆ ಬರೆದ ರೀತಿಯಲ್ಲೇ ಮುಖ್ಯ ಪರೀಕ್ಷೆಯನ್ನು ಬರೆಯಬೇಕು.‌ ಇದಕ್ಕೆ ಹೆದರಿಕೊಳ್ಳುವುದು ಬೇಡ. ಪ್ರತಿಯೊಬ್ಬ ವಿದ್ಯಾರ್ಥಿಗೂ ಹೆಚ್ಚು ಅಂಕ ತೆಗೆಯಬೇಕು, 100ಕ್ಕೆ 100 ತೆಗೆಯಬೇಕು ಎಂಬ ಆಸೆ ಇರುತ್ತದೆ. ಅದು ಒಳ್ಳೆಯದು. ಅದನ್ನು ಹೇಗೆ ಸಾಧಿಸುವುದು ಎಂಬುದರ ಬಗ್ಗೆ ಗಮನವಿರಬೇಕು. ಮತ್ತು ಗುರುಗಳು ಹೇಳಿಕೊಟ್ಟಿದ್ದನ್ನ ಸರಿಯಾಗಿ ಅಭ್ಯಾಸಿಸಬೇಕು‌.

ಈ ಬಾರಿ ಸರ್ಕಾರದವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಮಾದರಿ ಸುಲಭವಾಗಿದೆ. ಪ್ರಶ್ನೆಗಳಿಗೆ ಆಯ್ಕೆ ಇರುತ್ತದೆ. ಹಾಗಾಗಿ, ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಅಂಕ ತೆಗೆಯಲು ಸಾಧ್ಯ. ಎಲ್ಲಾ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಒತ್ತಡ ಮಾಡಿಕೊಳ್ಳದೇ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆಯಿರಿ ಎಂದು ಮರಿಮಲ್ಲಪ್ಪ ಕಾಲೇಜಿನ ಶಿಕ್ಷಕರಾದ ಎ. ಅನಿಲ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ:ದ್ವಿತೀಯ ಪಿಯು ಪರೀಕ್ಷೆಗೆ ತಯಾರಿ ಹೇಗೆ? ಆರೋಗ್ಯದ ಕಾಳಜಿ ಎಷ್ಟು ಅಗತ್ಯ? ಇಲ್ಲಿದೆ ಉಪಯುಕ್ತ ಟಿಪ್ಸ್!

ABOUT THE AUTHOR

...view details