ಜನಾಂದೋಲನ ಮಹಾಮೈತ್ರಿ ಅಧ್ಯಕ್ಷ ಎಸ್.ಆರ್. ಹಿರೇಮಠ ಮಾತನಾಡಿದರು. ಮೈಸೂರು:''ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೂಡಾ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು'' ಎಂದು ಜನಾಂದೋಲನ ಮಹಾಮೈತ್ರಿ ಅಧ್ಯಕ್ಷ ಎಸ್. ಆರ್. ಹಿರೇಮಠ ಕೇಂದ್ರ ಸರ್ಕಾರದ ವಿರುದ್ಧ ಗರಂ ಆದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳ ಡಬಲ್ ಎಂಜಿನ್ ಸರಕಾರವನ್ನು ಸೋಲಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡರು. ಹೀಗಾಗಿ ಇದರ ಪ್ರೇರಣೆ ಅಡಿ ಮುಂದಿನ ಲೋಕಸಭಾ ಚುನಾವಣೆ ಇರಲಿ'' ಎಂದು ಜನರಿಗೆ ಮನವಿ ಮಾಡಿದರು.
''ಜು.15ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಉಳಿದ ಸಂಘಟನೆಗಳೊಂದಿಗೆ ವಿಸ್ಕೃತ ಸಭೆ ನಡೆಯಲಿದೆ. ಈಗಾಗಲೇ ನೂತನ ಸರಕಾರ ರೈತ ವಿರೋಧಿ, ಕಾರ್ಪೊರೇಟ್ ಪರ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಪಡಿಸಿದ್ದರೂ, ಹಿಂದಿನ ಬಿಜೆಪಿ ಸರಕಾರ ದುರಾಡಳಿತದಲ್ಲಿ ತಂದಿದೆ. ಇನ್ನೆರೆಡೆ ಕಾಯ್ದೆಗಳನ್ನು ರದ್ದುಪಡಿಸಿ, ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಿನ ಪರಿಸ್ಥಿತಿ ಪುನರ್ ಸ್ಥಾಪಿಸಬೇಕೆಂದು ಒತ್ತಾಯಿಸಲಾಗುವುದು'' ಎಂದರು.
''2024ರ ಲೋಕಸಭಾ ಚುನಾವಣೆ, ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿಗಳನ್ನು ನಿರ್ಣಾಯಕವಾಗಿ ಸೋಲಿಸುವ ಹಾಗೂ ಈ ಶಕ್ತಿಗಳನ್ನು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ರಾಜಕಾರಣಕ್ಕಾಗಿ ಜನಾಂದೋಲನ ರೂಪಿಸಲು ವಿವಿಧೆಡೆ ಸಭೆಗಳನ್ನು ಆಯೋಜಿಸಲಾಗುತ್ತಿದೆ'' ಎಂದು ತಿಳಿಸಿದರು.
''ಈ ನಿಟ್ಟಿನಲ್ಲಿ ಆಗಸ್ಟ್ 5 ಮತ್ತು 6ರಂದು ನವದೆಹಲಿಯ ಗಾಂಧಿ ಹೌಸ್‌ನಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಈ ಹಿಂದೆ ಮೂರು ಕರಾಳ ಕಾಯ್ದೆ ವಿರೋಧಿಸಿ ಉತ್ತರದ ಬಸವ ಕಲ್ಯಾಣದಿಂದ ಮಧ್ಯ ಕರ್ನಾಟಕದ ಶಿವಮೊಗ್ಗ ಕಾಗೋಡಿನಿಂದ ಹಾಗೂ ದಕ್ಷಿಣದ ಮಹದೇಶ್ವರ ಬೆಟ್ಟದಿಂದ ಜನಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಇದರ ಸಮಾವೇಶ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ ನಡೆದಿದೆ. ಇದರೊಡನೆ ಜೂ.25, 26 ರಂದು ರಾಷ್ಟ ಮಟ್ಟದ ದುಂಡು ಮೇಜಿನ ಸಭೆ ಹಾಗೂ ಜನ ಬದುಕಿನ ಸಮಾವೇಶ ನಡೆಸಿ, ರೈತ, ಯುವಜನಪರ ಸಂಘಟನೆಗಳನ್ನು ಒಗ್ಗೂಡಿಸಿ ಜನವಿರೋಧಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲು ಕರೆ ನೀಡಲಾಗಿತ್ತು. ಇವುಗಳೊಡನೆ ಸಮಾಜ ಪರಿವರ್ತನ ಸತ್ಯಾಗ್ರಹ ಜಾಥಾ ಆಯೋಜಿಸಲಾಗಿತ್ತು'' ಎಂದರು.
''ಈಗ ಮುಂದಿನ ಲೋಕಸಭಾ ಚುನಾವಣೆ ಹಾಗೂ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ, ನವದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ'' ಎಂದು ನುಡಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ''ರಾಜ್ಯದ ನೂತನ ಸರಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿದರೂ, ಜಾನುವಾರು ಹತ್ಯೆ ನಿಷೇಧ ಮತ್ತು ಜಾನುವಾರ ಸಂರಕ್ಷಣಾ ಕಾಯ್ದೆಗಳನ್ನು ತ್ವರಿತವಾಗಿ ರದ್ದುಪಡಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಜು.15ರ ಶನಿವಾರ ನಡೆಯಲಿರುವ ಅಖಿಲ ಭಾರತ ಅನುಭವ ಮಂಟಪದ ಹೆಸರಿನ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ ಮಟ್ಟದ ಸಂಘಟನೆಗಳ ಮುಖಂಡರು, ಆಸಕ್ತರು ಪಾಲ್ಗೊಳ್ಳಬೇಕು'' ಎಂದು ಮನವಿ ಮಾಡಿದರು. ರಾಘವೇಂದ್ರ ಕುಷ್ಟಗಿ, ಅಭಿರುಚಿ ಗಣೇಶ್, ಉಗ್ರನರಸಿಂಹೇಗೌಡ ಮತ್ತಿತರರು ಇದ್ದರು.
ಇದನ್ನೂ ಓದಿ:ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಪ್ರಾಮಾಣಿಕವಾಗಿ ದುಡಿದು ಆಸ್ತಿ ಮಾಡಿದ್ದೇನೆ: ಸಂಸದ ಸಿದ್ದೇಶ್ವರ್ ತಿರುಗೇಟು