ಮೈಸೂರು:ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಕಲಿ ರಸೀದಿ ಮೂಲಕ ಭಕ್ತರಿಂದ ಹಣ ವಸೂಲಿ ಮಾಡಿರುವ ಪ್ರಕರಣ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ತಹಶೀಲ್ದಾರ್ ತನಿಖೆ ಕೈಗೊಂಡಿದ್ದಾರೆ.
ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಸಿದ್ಧ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಲಾಗಿತ್ತು. ಇದಕ್ಕೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡಸಲಾಗಿತ್ತು. ಜೊತೆಗೆ ಭಕ್ತರಿಂದಲೂ ಸಹ ಜೀರ್ಣೋದ್ಧಾರಕ್ಕೆ ಹಣ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಗೆ ತಹಶೀಲ್ದಾರ್ ಅವರ ಸಹಿ ಮತ್ತು ಸೀಲ್ ಇರುವ 13 ರಸೀದಿ ಪುಸ್ತಕಗಳನ್ನು ಪ್ರಿಂಟ್ ಮಾಡಿಸಿ ಸಮಿತಿಗೆ ಭಕ್ತರಿಂದ ಹಣ ಪಡೆಯಲು ನೀಡಲಾಗಿತ್ತು.
ಆದರೆ ಈ ಸಮಿತಿ 13 ರಸೀದಿ ಪುಸ್ತಕಗಳ ಜೊತೆಗೆ ಕೆಲವು ನಕಲಿ ಪುಸ್ತಕಗಳನ್ನು ತಾವೇ ಪ್ರಿಂಟ್ ಮಾಡಿಸಿಕೊಂಡು ಭಕ್ತರಿಂದ ಹಣ ವಸೂಲಿಗೆ ಮುಂದಾಗಿದ್ದರು. ಇದನ್ನು ತಿಳಿದ ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಸಮಿತಿಯ ಸದಸ್ಯರನ್ನು ತಮ್ಮ ಕಚೇರಿಗೆ ಕರೆಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಪ್ಪೊಪ್ಪಿಕೊಂಡಿದ್ದಾರೆ.