ಕರ್ನಾಟಕ

karnataka

ETV Bharat / state

ಮೈಸೂರು: ಅನುಮಾನಾಸ್ಪದ ರೀತಿಯಲ್ಲಿ ಚಿರತೆ ಸಾವು - ಮರಣೋತ್ತರ ಪರೀಕ್ಷೆ

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ, ವೈದ್ಯಾಧಿಕಾರಿ ಭೇಟಿ ನೀಡಿದ್ದು, ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Suspicious death of a leopard in Mysore
ಜಮೀನೊಂದರಲ್ಲಿ ಅನುಮಾನಾಸ್ಪದವಾಗಿ ಚಿರತೆ ಸಾವು

By ETV Bharat Karnataka Team

Published : Oct 12, 2023, 5:02 PM IST

ಮೈಸೂರು: ಅನುಮಾನಾಸ್ಪದ ರೀತಿಯಲ್ಲಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹೆಡಿಯಾಲ ಮತ್ತು ಚಂಗೌಡನಹಳ್ಳಿಗೆ ಹೋಗುವ ರಸ್ತೆ ಪಕ್ಕದ ಜಮೀನೊಂದರಲ್ಲಿ ಕಳೇಬರ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಲ್ಲಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಿದ್ದು ಅನುಮಾನ ಮೂಡಿಸಿದೆ.

ಸುಮಾರು 3 ವರ್ಷದ ಹೆಣ್ಣು ಚಿರತೆಯನ್ನು ಕಿಡಿಗೇಡಿಗಳು ಕೊಂದು ತಂದು ಎಸೆದಿರಬಹುದೇ? ಅಥವಾ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿರಬಹುದೇ? ಎಂಬ ಅನುಮಾನ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿ ನಾರಾಯಣ್, ಬಂಡೀಪುರ ವೈದ್ಯಾಧಿಕಾರಿ ಡಾ.ಮಿರ್ಜಾ ವಸೀಮ್ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮಾವುತನ ಮೇಲೆ ಕಾಡಾನೆ ದಾಳಿ:ಮೇಯಲು ಬಿಟ್ಟಿದ್ದ ಸಾಕಾನೆಯನ್ನು ಕರೆತರಲು ಕಾಡಿಗೆ ಹೋಗಿದ್ದ ಮಾವುತನ ಮೇಲೆ ಕಾಡಾನೆ ದಾಳಿಗೆ ಮುಂದಾಗಿದ್ದು, ಓಡುವಾಗ ಬಿದ್ದು ಮಾವುತ ಗಾಯಗೊಂಡಿರುವ ಘಟನೆ ನಾಗರಹೊಳೆಯ ಅರಣ್ಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ಬಳ್ಳೆ ವನ್ಯಜೀವಿ ವಲಯದ ಸಾಕಾನೆ ಶಿಬಿರದ ಮಾವುತ ಮಾಯಪ್ಪ ಗಾಯಾಳು. ಮಾಯಪ್ಪ ಎಂದಿನಂತೆ ಸಾಕಾನೆಯನ್ನು ಕಾಡಿಗೆ ಮೇಯಲು ಬಿಟ್ಟಿದ್ದಾನೆ. ಅದನ್ನು ಮರಳಿ ಕರೆತರಲು ಕಾಡಿಗೆ ತೆರಳಿದ್ದ ವೇಳೆ ಕಾಡಾನೆ ದಾಳಿಗೆ ಮುಂದಾಗಿದೆ. ಪ್ರಾಣ ಉಳಿಸಿಕೊಳ್ಳಲು ಮಾಯಪ್ಪ ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದು, ಕುತ್ತಿಗೆ ಮತ್ತು ಮುಖದ ಬಳಿ ಗಾಯಗಳಾಗಿವೆ. ಸದ್ಯ ಅವರಿಗೆ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಸುಗಳ ಮೇಲೆ ಹುಲಿ ದಾಳಿ:ಇತ್ತೀಚೆಗೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿಯೊಂದು ದಾಳಿ ಮಾಡಿದ್ದ ಘಟನೆ ನಡೆದಿತ್ತು. ಒಂದು ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಂದು ಹಸು ಗಂಭೀರವಾಗಿ ಗಾಯಗೊಂಡಿತ್ತು. ಲಿಂಗರಾಜು ಎನ್ನುವವರ ಪುತ್ರ ವಿಕಾಸ್​ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ಮಾಡಿದೆ. ಸ್ಥಳಕ್ಕೆ ದಮ್ಮನಕಟ್ಟೆ ವಲಯ ಅರಣ್ಯಾಯಾಧಿಕಾರಿ ಭರತ್​ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಮೈಸೂರು: ನಾಲೆಗೆ ಬಿದ್ದ ಜಿಂಕೆಯನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಿಸಿದ ಪಿಎಸ್​ಐ

ABOUT THE AUTHOR

...view details