ಮೈಸೂರು:ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಆಕೆಯ ಗಂಡ ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಹಳ್ಳಿ ಗ್ರಾಮದ ನಿವಾಸಿ ಮಹದೇವಸ್ವಾಮಿ (39) ಕೊಲೆಯಾದ ವ್ಯಕ್ತಿ. ಇವರು ಶನಿವಾರ ಮಧ್ಯಾಹ್ನ ಗ್ರಾಮದ ಚಾವಡಿ ಸಮೀಪದಲ್ಲಿ ಮಲಗಿದ್ದಾಗ ಇದ್ದಕ್ಕಿದಂತೆ ಸ್ಥಳಕ್ಕೆ ಆಗಮಿಸಿದ ಆರೋಪಿ ಸೋಮಯ್ಯ, ನನ್ನ ಪತ್ನಿಯೊಂದಿಗೆ ನೀನು ಅಕ್ರಮ ಸಂಬಂಧ ಹೊಂದಿದ್ದಿ ಎಂದು ಗಲಾಟೆ ಮಾಡಿದ್ದಾನೆ. ಇದೇ ವೇಳೆ ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ.
ನಂತರ ಸ್ಥಳಕ್ಕೆ ಆಗಮಿಸಿದ ಹಲ್ಲೆಗೊಳಗಾದ ಮಹಾದೇವಸ್ವಾಮಿಯ ಮಾವ ರವಿ ಎಂಬವರು, ಆತನನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿಸಿದರು. ನಂತರ ಮೈಸೂರು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮಹಾದೇವಸ್ವಾಮಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
''ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೋಮಯ್ಯನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ'' ಎಂದು ನಂಜನಗೂಡು ವಿಭಾಗದ ಡಿವೈಎಸ್‌ಪಿ ಗೋವಿಂದರಾಜು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಪ್ರತ್ಯೇಕ ಪ್ರಕರಣ- ವ್ಯಕ್ತಿ ಬರ್ಬರ ಹತ್ಯೆ:ವ್ಯಕ್ತಿಯನ್ನು ರಸ್ತೆಯಲ್ಲೇ ಕೊಲೆ ಮಾಡಿರುವ ಘಟನೆ ಧಾರವಾಡ ಮರಾಠ ಕಾಲೋನಿಯಲ್ಲಿ ಭಾನುವಾರ ಜರುಗಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಮೃತಪಟ್ಟಿರುವ ವ್ಯಕ್ತಿ. ಆಸ್ತಿ ವಿಚಾರದ ಹಿನ್ನೆಲೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿಂಗಪ್ಪ ಅವರ ಮೇಲೆ ಮೂವರು ಆರೋಪಿಗಳು ಒಟ್ಟಾಗಿ ಸೇರಿಕೊಂಡು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆ ಮಾಡುತ್ತಿರುವ ದೃಶ್ಯಗಳನ್ನು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿದಿರುವುದು ಬೆಳಕಿಗೆ ಬಂದಿದೆ.
"ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ ಎಂಬವರ ಹತ್ಯೆ ಮಾಡಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ದೊರೆತಿದ್ದು, ಮೂವರು ಹತ್ಯೆ ಮಾಡಿದ್ದಾರೆ. ಸಂಬಂಧಿಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಕುಟುಂಬದ ಆಸ್ತಿ ವಿವಾದಕ್ಕೆ ಈ ಕೊಲೆ ಮಾಡಿರುವ ಶಂಕೆಯಿದೆ. ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸುತ್ತೇವೆ. ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ. ನಿಂಗಪ್ಪ ಅವರ ಗ್ರಾಮ ಹೆಬ್ಬಳಿ, ಆದ್ರೆ ಅವರು ಧಾರವಾಡದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು" ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ತಿಳಿಸಿದರು.
ಇದನ್ನೂ ಓದಿ:ಕಂದಕಕ್ಕೆ ಉರುಳಿದ ಪ್ರವಾಸಿ ಟೆಂಪೋ ಟ್ರಾವೆಲರ್: ಇಬ್ಬರು ಪ್ರವಾಸಿಗರು ಸಾವು