ಮೈಸೂರು: ಸುಮಲತಾ ಬಿಜೆಪಿ ಸೇರುತ್ತಾರೆ ಎಂದರೆ ಅದು ನಮಗೆ ಶಕ್ತಿ ಇದ್ದಂತೆ, ಅವರು ಬರುವುದರಿಂದ ಈ ಭಾಗದಲ್ಲಿ ರಾಜಕೀಯ ಲಾಭವೂ ಸಹ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಉದ್ಘಾಟನೆಗೆ ಆಗಮಿಸುತ್ತಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು, ಮೈಸೂರು ವಿಮಾನ ನಿಲ್ದಾಣದಿಂದ ಮಂಡ್ಯಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿ, ಅಲ್ಲಿ 2 ಕಿಲೋ ಮೀಟರ್ ರೋಡ್ ಶೋ ಮಾಡುತ್ತಾರೆ. ನಂತರ ಹೆದ್ದಾರಿಯನ್ನು 50 ಮೀಟರ್ನಷ್ಟು ನಡೆದುಕೊಂಡು ಬಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವುದು, ಬಿಜೆಪಿ ಪಾರ್ಟಿಗೆ ಶಕ್ತಿ ಬಂದಂತಾಗಿದೆ. ಅಂಬರೀಶ್ ಜನಪ್ರಿಯ ನಟರಾಗಿದ್ದರು. ಅವರಿಗೆ ಅವಮಾನ ಮಾಡಿದರು ಎಂಬ ಕಾರಣಕ್ಕಾಗಿ ಜನ ಸ್ವಾಭಿಮಾನದಿಂದ ಸೆಟೆದುನಿಂತು, ಅವಮಾನ ಮಾಡಿದವರಿಗೆ ಪಾಠ ಕಲಿಸಿದರು. ಈಗ ಸುಮಲತಾ ಅಂಬರೀಶ್ ಬಗ್ಗೆ ಜನ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಇವರು ಬಿಜೆಪಿಗೆ ಸೇರುತ್ತಾರೆ ಎಂದರೆ ಇದರಿಂದ ನಮ್ಮ ಪಾರ್ಟಿಗೆ ಶಕ್ತಿ ಬಂದಂತೆ, ಜೊತೆಗೆ ರಾಜಕೀಯ ಲಾಭವು ಆಗುತ್ತದೆ. ಏಕೆಂದರೆ ಸುಮಲತಾ ಮಾಡಿರುವ ಕೆಲಸಗಳು ಹಾಗೂ ಮೋದಿಯವರ ಕೆಲಸಗಳು ಜನರಿಗೆ ತಲುಪಿದ್ದು, ಇದು ಸಹ ಪಕ್ಷಕ್ಕೆ ಸಹಾಯವಾಗುತ್ತದೆ ಎಂದರು.
ಮುಕ್ತ ಚರ್ಚೆಗೆ ಆಹ್ವಾನ:ಬೆಂಗಳೂರು -ಮೈಸೂರು ನಡುವಿನ ಎಕ್ಸ್ಪ್ರೆಸ್ ಹೈವೇ ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿತ್ತು ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಹೈವೇ ಕ್ರೆಡಿಟ್ ಅನ್ನು ಕಾಂಗ್ರೆಸ್ ತೆಗೆದುಕೊಳ್ಳಲು ಹೊರಟಿದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ಬಿಜೆಪಿ ಸರ್ಕಾರದ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಏಕೆಂದರೆ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನರೇಂದ್ರ ಮೋದಿ. ಇದಕ್ಕೆ ಉದ್ಘಾಟನೆ ಮಾಡಲು ಬರುತ್ತಿರುವವರು ನರೇಂದ್ರ ಮೋದಿಯವರೇ. ಇದರ ಕ್ರೆಡಿಟ್ ನಮಗೆ ಸಲ್ಲಬೇಕು.