ಮೈಸೂರು: ಮದ್ಯ ಸಿಗದೆ ವ್ಯಕ್ತಿಯೊಬ್ಬ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ನಗರದ ಗುಂಡೂರಾವ್ ನಗರದಲ್ಲಿ ನಡೆದಿದೆ.
ಮದ್ಯ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ! - ಎಣ್ಣೆ ಸಿಗದೇ ವ್ಯಕ್ತಿ ಆತ್ಮಹತ್ಯೆ
ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆ ಮದ್ಯದ ಅಂಗಡಿಗಳು ಬಂದ್ ಆಗಿದ್ದು, ಮದ್ಯ ಸಿಗದ ಬೇಸರದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮದ್ಯ ಸಿಗಲಿಲ್ಲ ಅಂತಾ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಆನಂದ್ (45) ಎಂದು ಗುರುತಿಸಲಾಗಿದೆ. ಈತ ಗುಂಡೂರಾವ್ ನಗರದ ಹೊಯ್ಸಳ ಬಡಾವಣೆಯ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಮೈಸೂರು ಅರಮನೆಯ ಮುಂಭಾಗದಲ್ಲಿ ಗೈಡ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈತ ಪ್ರತಿದಿನ ಬೆಳಿಗ್ಗೆಯಿಂದಲೇ ಮದ್ಯ ಸೇವನೆ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಆದರೆ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಲಾಕ್ಡೌನ್ ಆಗಿರುವುದರಿಂದ ಎಲ್ಲೂ ಮದ್ಯ ಸಿಗದೆ ಬೇಸರಗೊಂಡು ಮನೆಯ ಮುಂಭಾಗ ಚಾಕುವಿನಿಂದ ತನ್ನ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈತನನ್ನು ತಕ್ಷಣ ವಿದ್ಯಾರಣ್ಯಪುರ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು, ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.