ಮೈಸೂರು: ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದ್ದು, ವಾಹನ ಸವಾರರು ಹಿಡಿಶಾಪ ಹಾಕುವಂತಾಗಿದೆ. ಹೀಗಾಗಿ ಜನತೆ ಸಹ ಎಲೆಕ್ಟ್ರಿಕ್ ವಾಹನಗಳ ಕಡೆ ಇತ್ತೀಚಿಗೆ ಗಮನ ಹರಿಸುತ್ತಿದ್ದು, ಮಾರುಕಟ್ಟೆ ಸಹ ಬೆಳೆಯುತ್ತಿದೆ. ಇದರ ನಡುವೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಹಳೆಯ ಕಾರುಗಳನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಿ ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
10 ವರ್ಷ ಹಳೆಯದಾದ ಟಾಟಾ ನ್ಯಾನೋ ಕಾರು ಬಳಸಿಕೊಂಡು ಇದಕ್ಕೆ ವಿದ್ಯುತ್ ಮೋಟಾರ್ ನಿಯಂತ್ರಕ ಬ್ಯಾಟರಿ ಅಳವಡಿಸಿ ಕೇವಲ 96,659 ವೆಚ್ಚದಲ್ಲಿ ಇಂಧನ ಕಾರನ್ನು ಎಲೆಕ್ಟ್ರಿಕ್ ಕಾರನ್ನಾಗಿ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯ ಮಾಡಿ ತೋರಿಸಿದ್ದಾರೆ.
ನಗರದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿಧ್ಯಾರ್ಥಿಗಳ ತಂಡವು ಹಳೆಯ ಐಸಿಎಂಜಿನ್ ಅಂದರೆ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಎಲೆಕ್ಟ್ರಿಕ್ ಕಾರನ್ನಾಗಿ ಪರಿವರ್ತಿಸಿದ್ದಾರೆ.
ಅಂತಿಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ಅಧ್ಯಯನ ಪ್ರಾಜೆಕ್ಟ್ ಆಗಿರುವ ಕಾರಣ ವಿದ್ಯಾರ್ಥಿಗಳು 10 ವರ್ಷ ಹಳೆಯ ನ್ಯಾನೊ ಕಾರನ್ನು 41,500 ರೂ.ಗೆ ಖರೀದಿ ಮಾಡಿ ಅದರ ಇಂಜಿನ್ ತೆಗೆದು ಅದಕ್ಕೆ 96,659 ರೂ. ವೆಚ್ಚ ಮಾಡಿ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಮೋಟರ್ ಅನ್ನು ಅಳವಡಿಸಿ ಪರಿಸರ ಸ್ನೇಹಿ ಕಾರನ್ನಾಗಿ ಪರಿವರ್ತಿಸಿದ್ದಾರೆ.