ಕರ್ನಾಟಕ

karnataka

ETV Bharat / state

ಪಕ್ಷಿಗಳ ದಾಹ ತಣಿಸಲು ಮುಂದಾದ ವಿದ್ಯಾರ್ಥಿಗಳು.. ಹಳೆ ಹೆಲ್ಮೆಟ್ ಬಳಸಿ ವಿನೂತನ ಪ್ರಯತ್ನ - ಮೈಸೂರು ನಗರದ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು

ಮೈಸೂರು ನಗರದ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ಬಳಸಿ ಬಿಸಾಡಿರುವ ಹೆಲ್ಮೆಟ್​ ಅನ್ನು ಆರಿಸಿ ತಂದು, ಅವುಗಳನ್ನು ನೀರಿನ ಕುಂಡಗಳಾಗಿ ಪರಿವರ್ತಿಸಿದ್ದಾರೆ. ಇವುಗಳನ್ನು ಪ್ರಾಣಿ-ಪಕ್ಷಿಗಳ ದಾಹ ತಣಿಸಲು ಬಳಸಲಾಗುತ್ತಿದೆ.

ಪಕ್ಷಿಗಳ ದಾಹ ತಣಿಸಲು ಮುಂದಾದ ವಿದ್ಯಾರ್ಥಿಗಳು
ಪಕ್ಷಿಗಳ ದಾಹ ತಣಿಸಲು ಮುಂದಾದ ವಿದ್ಯಾರ್ಥಿಗಳು

By

Published : Mar 13, 2023, 6:55 PM IST

ಹಳೆ ಹೆಲ್ಮೆಟ್ ಬಳಸಿ ವಿನೂತನ ಪ್ರಯತ್ನ

ಮೈಸೂರು : ಕಸದಿಂದ ರಸ ತೆಗೆಯುತ್ತಾರೆ ಎಂಬ ಗಾದೆ ಮಾತಿಗೆ ಇಲ್ಲೊಂದು ನಿದರ್ಶನ ಇದೆ. ನಗರದ ಕಾಲೇಜಿನ ಎನ್​ಎಸ್​ಎಸ್ ವಿದ್ಯಾರ್ಥಿಗಳು ಬಳಸಿ ಬಿಸಾಡಿರುವ ಹೆಲ್ಮೆಟ್ ಅನ್ನು ಆರಿಸಿ ತಂದು, ಅವುಗಳಿಗೆ ಹೊಸ ರೂಪ ಕೊಟ್ಟು, ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಅವುಗಳನ್ನ ನೀರಿನ ಕುಂಡಗಳಾಗಿ ಪರಿವರ್ತಿಸಿದ್ದಾರೆ. ನಂತರ ಇವುಗಳನ್ನು ಪಾರ್ಕ್​ನಲ್ಲಿ ಇಡುವ ಮೂಲಕ ಬೇಸಿಗೆಯಲ್ಲಿ ಪಕ್ಷಿಗಳ‌ ದಾಹ ತಣಿಸುವ ಕೆಲಸವನ್ನ ಮಾಡಲಾಗುತ್ತಿದ್ದಾರೆ. ಇದೊಂದು ವಿನೂತನ ಪ್ರಯತ್ನಕ್ಕೆ ಪರಿಸರ ಪ್ರೇಮಿಗಳಿಂದ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೇಸಿಗೆ ಆರಂಭವಾಗಿರುವುದರಿಂದ ಎಲ್ಲೆಲ್ಲೂ ಪ್ರಾಣಿ, ಪಕ್ಷಿಗಳಿಗೆ ತಮ್ಮ ದಾಹವನ್ನ ಮತ್ತು ಹಸಿವೆ ನೀಗಿಸಿಕೊಳ್ಳಲು ಪರದಾಡುತ್ತಿರುತ್ತವೆ. ಮನುಷ್ಯನಾದರೆ ತನಗೆ ಹಸಿವಾಗಿದೆ, ದಾಹವಾಗಿದೆ ಎಂದು ಕೇಳುವುದರ ಮೂಲಕ ತನ್ನ ಹಸಿವೆಯನ್ನ ನೀಗಿಸಿಕೊಳ್ಳುತ್ತಾನೆ. ಆದರೆ, ಮೂಕ ಪ್ರಾಣಿ, ಪಕ್ಷಿಗಳು ಅದರಲ್ಲೂ ಪಕ್ಷಿಗಳು ತಮ್ಮ ಹಸಿವೆಯನ್ನ ಹೇಳಿಕೊಳ್ಳಲಾಗದೇ ಸಂಕಟಪಡುತ್ತಿರುತ್ತವೆ. ಆದ್ದರಿಂದ ಮೂಖ ಪ್ರಾಣಿ, ಪಕ್ಷಿಗಳ ದಾಹ ಮತ್ತು ಹಸಿವೆ ನೀಗಿಸಲೆಂದೇ ಮೈಸೂರಿನ ಶೇಷಾದ್ರಿಪುರಂ ಕಾಲೇಜಿನ ಎನ್​ಎಸ್​ಎಸ್​ ವಿದ್ಯಾರ್ಥಿಗಳು ಹಳೇ ಹೆಲ್ಮೆಟ್​ಗಳನ್ನು ಬಳಸಿ ಪ್ರಾಣಿ ಮತ್ತು ಪಕ್ಷಿಗಳ ಹಸಿವೆ ನೀಗಿಸುವ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಹೆಲ್ಮೆಟ್​ಗಳನ್ನು ಬಳಸಿ ವಿನೂತನ ಪ್ರಯತ್ನ ಹೇಗೆ :ಈ ಹೆಲ್ಮೆಟ್ ಯೋಜನೆಯ ಮೊದಲು ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಪಕ್ಷಿಗಳಿಗೆ ನೀರು ಒದಗಿಸಲು ಆಲೋಚನೆ ಮಾಡಲಾಗಿತ್ತು. ಆದರೆ ಈ ಡಬ್ಬಗಳನ್ನು ಕಳವು ಮಾಡುವ ಭೀತಿ ಇರುವುದರಿಂದ ಹಳೇ ಹೆಲ್ಮೆಟ್​ಗಳನ್ನು ಬಳಸುವ ಯೋಚನೆ ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ರಾಘವೇಂದ್ರ ಅವರಿಗೆ ಮೊದಲು ಬಂದಿದೆ. ನಂತರ ಅವರು ಈ ಹೆಲ್ಮೆಟ್ ಅನ್ನು ಹೇಗೆ ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಅದರಂತೆ ವಿದ್ಯಾರ್ಥಿಗಳು ಮೊದಲು ಪೊಲೀಸ್​ ಠಾಣೆಗಳು, ಹೆಲ್ಮೆಟ್ ಮಾರಾಟ ಅಂಗಡಿ, ರೈಲ್ವೆ ನಿಲ್ದಾಣ, ಪಾರ್ಕಿಂಗ್ ಸ್ಥಳಗಳು ಸೇರಿದಂತೆ ಹಲವು ಕಡೆ ಸಿಗುವ ಹಳೆಯ ಹೆಲ್ಮೆಟ್​ಗಳನ್ನು ಸಂಗ್ರಹ ಮಾಡಿ ಬಳಸಿಕೊಳ್ಳಲಾಯಿತು. ಈ ರೀತಿ ತಂದ ಹೆಲ್ಮೆಟ್​ಗಳನ್ನು ಅದರಲ್ಲಿ ಇರುವ ಸ್ಪಂಜುಗಳನ್ನ ತೆಗೆದು ಹಾಕಿ, ಅವುಗಳನ್ನು ಬಟ್ಟಲುಗಳ ಆಕೃತಿಯಲ್ಲಿ ಕತ್ತರಿಸಿ, ಅದನ್ನು ಪಕ್ಷಿಗಳಿಗೆ ಯಾವುದೇ ರೀತಿ ತೊಂದರೆ ಆಗದ ಹಾಗೆ ಶುಚಿ ಮಾಡಲಾಯಿತು.

ಶ್ಲಾಘನೆಗೆ ಕಾರಣವಾದ ಪ್ರಾಣಿ - ಪಕ್ಷಿಗಳ ಕಾಳಜಿ : ಈ ರೀತಿ ಶುಚಿ ಮಾಡಿದ ನಂತರ ಅವುಗಳನ್ನು ತಂದು ನಗರದಲ್ಲಿ ಇರುವ ಹಲವು ಪಾರ್ಕ್​ಗಳಲ್ಲಿ ಮರಗಳಿಗೆ ಬಟ್ಟಲುಗಳ ರೀತಿ ಅವುಗಳನ್ನು ಕಟ್ಟಿ, ಅವುಗಳಿಗೆ ನಿತ್ಯವೂ ನೀರು ಮತ್ತು ಆಹಾರವನ್ನು ‌ಹಾಕುವ ಮೂಲಕ, ಕಾಲೇಜಿನ ಎನ್​ಎಸ್​ಎಸ್​ ವಿದ್ಯಾರ್ಥಿಗಳು ಬಿರು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಹಸಿವು ದಾಹಗಳನ್ನ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ಪ್ರಾಣಿ ಪಕ್ಷಿಗಳ ಕಾಳಜಿ ಶ್ಲಾಘನೀಯವಾಗಿದೆ.

ಇದನ್ನೂ ಓದಿ :ಬೆಂಗಳೂರು ಮೈಸೂರು ಹೆದ್ದಾರಿಯ ಟೋಲ್‌ ರದ್ದುಪಡಿಸಿ, ನಂತರ ಸರ್ಕಾರ ಜಂಭ ಕೊಚ್ಚಿಕೊಳ್ಳಲಿ: ಬ್ರಿಜೇಶ್‌ ಕಾಳಪ್ಪ

ABOUT THE AUTHOR

...view details