ಮೈಸೂರು:ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳ ನಿಯಂತ್ರಣಕ್ಕೆ ನಾಗರಹೊಳೆ ವ್ಯಾಪ್ತಿಯ ಪ್ರದೇಶದಲ್ಲಿ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ರೈಲ್ವೆ ಬ್ಯಾರಿಕೇಡ್ ದಾಟಿ ಕಾಡಾನೆಗಳು ಬರುತ್ತಿವೆ. ಇದನ್ನು ತಡೆಯಲು ಅರಣ್ಯ ಇಲಾಖೆ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಸಿದ್ದು, ಇದು ರಾಜ್ಯದಲ್ಲೇ ಮೊದಲಾಗಿದೆ. ಇದು ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಸಹಕಾರಿಯಾಗಲಿದೆ.
ರೈಲ್ವೆ ಬ್ಯಾರಿಕೇಡ್ ಕೊರತೆ ಹಾಗೂ ದುಬಾರಿ ವೆಚ್ಚದ ಹಿನ್ನೆಲೆಯಲ್ಲಿ ರೋಪ್ ಬ್ಯಾರಿಯರ್ ಅನ್ನು ಮೊದಲ ಬಾರಿಗೆ ಅಳವಡಿಸಲಾಗಿದ್ದು, 13 ಅಡಿ ಉದ್ದ, 1.5 ಟನ್ ತೂಕದ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅವುಗಳನ್ನು 5 ಅಡಿ ಆಳದಲ್ಲಿ ಭೂಮಿಯಲ್ಲಿ ನೆಟ್ಟು, ಆನಂತರ ಸ್ಟೀಲ್ ವೈಯರ್ ರೋಪ್ ಅಳವಡಿಸಲಾಗುತ್ತದೆ. ಈ ರೀತಿಯ ಒಂದು ಪ್ರಯೋಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದೆ.