ಮೈಸೂರು: ದೆಹಲಿಯ ಇಂಡಿಯಾ ಗೇಟ್ ಬಳಿ ತಲೆ ಎತ್ತಲಿರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕೆತ್ತನೆ ಮಾಡುವ ಭಾಗ್ಯ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ಗೆ ಒಲಿದಿದೆ.
ಆಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಏಕಶಿಲಾ ಗ್ರಾನೈಟ್ ಕಲ್ಲಿನ ಪ್ರತಿಮೆಯ ನಿರ್ಮಾಣ ಮಾಡುವ ಅವಕಾಶ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ಗೆ ದೊರೆತಿದ್ದು, ಯೋಗ ದಿನದಂದು ಸಾಂಸ್ಕೃತಿಕ ನಗರಿಗೆ ಪ್ರಧಾನಿ ಬರುತ್ತಿರುವ ಬೆನ್ನಲ್ಲೇ ಇದೀಗ ಮೈಸೂರಿಗೆ ಮತ್ತೊಂದು ಬಂಪರ್ ಅವಕಾಶ ಸಿಕ್ಕಿದಂತಾಗಿದೆ.
ಅರುಣ್ ಯೋಗಿರಾಜ್ ಅವರಿಗೆ ನೇತಾಜಿ ಪ್ರತಿಮೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನ ಕೇಂದ್ರ ಸರ್ಕಾರ ವಹಿಸಿದ್ದು, ಈ ಪ್ರತಿಮೆಯ ನಿರ್ಮಾಣಕ್ಕೆ ದೇಶದ ಪ್ರಮುಖ ಆರು ಶಿಲ್ಪ ಕಲಾವಿದರ ಕಮಿಟಿ ರಚಿಸಲಾಗಿತ್ತು. ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಕಲಾವಿದ ಅರುಣ್ ಯೋಗಿರಾಜ್ ಅವರಿಗೆ ಅಂತಿಮವಾಗಿ ಮೂರ್ತಿ ನಿರ್ಮಾಣದ ಜವಾಬ್ದಾರಿ ದೊರೆತಿದೆ. ಈ ಹಿಂದೆಯೂ ಕೂಡ ಅರುಣ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಎರಡು ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದರು.
ಆರು ತಲೆಮಾರಿನಿಂದ ಶಿಲ್ಪ ಕಲಾಕೃತಿ ಮಾಡಿಕೊಂಡು ಬಂದ ಯೋಗಿರಾಜ್ ಕುಟುಂಬ: ಇಂಡಿಯಾ ಗೇಟ್ ಬಳಿ ನೇತಾಜಿ ಪ್ರತಿಮೆ ಸ್ಥಾಪಿಸಬೇಕೆಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕಾಗಿ ಕಲಾವಿದರನ್ನ ಆಯ್ಕೆ ಮಾಡಲೆಂದು ಸಂಸ್ಕೃತಿ ಸಚಿವಾಲಯ ಹಾಗೂ ಎನ್.ಜಿ.ಎಂ.ಎ ಸಮಿತಿಯೊಂದನ್ನು ರಚಿಸಿತ್ತು. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಸಾಹು, ರಾಮ್ ವಿ ಸುತಾರ್ ಹೆಸರು ಕೂಡ ಇದರಲ್ಲಿ ಕೇಳಿ ಬಂದಿತ್ತು. ಜನವರಿ ತಿಂಗಳಲ್ಲಿ ಇದಕ್ಕಾಗಿ ಕಲಾವಿದರೊಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಕೂಡ ನಡೆದಿತ್ತು. ಕೊನೆಯದಾಗಿ ಆರು ತಲೆಮಾರಿನಿಂದ ಶಿಲ್ಪಕಲಾಕೃತಿ ಮಾಡಿಕೊಂಡು ಬಂದಿರುವ ಯೋಗಿರಾಜ್ ಕುಟುಂಬಕ್ಕೆ ನೇತಾಜಿ ಪ್ರತಿಮೆ ಕೆತ್ತನೆ ಮಾಡುವ ಅವಕಾಶ ಕೂಡಿ ಬಂದಿದೆ.