ಮೈಸೂರು: ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಸೃಷ್ಟಿಸಿರುವ ಕಾಮನ್ ಮ್ಯಾನ್ (ಸಾಮಾನ್ಯ ಪ್ರಜೆ) ಈಗ ನಗರದ ರೈಲ್ವೆ ಮ್ಯೂಸಿಯಂ ಆವರಣದಲ್ಲಿ ನಿಂತಿದ್ದಾರೆ.
ನಗರದ ರೈಲ್ವೆ ಮ್ಯೂಸಿಯಂ ವಿಭಾಗವು ಪ್ರಸಿದ್ಧ ವಿಡಂಬನಾ ಪಾತ್ರದ ಶಿಲ್ಪವನ್ನು ರೈಲು ಸಂಗ್ರಹಾಲಯದ ಆವರಣದಲ್ಲಿ ಸ್ಥಾಪಿಸಿದ್ದು, ಕೈಯಲ್ಲೊಂದು ಪೇಪರ್ ಹಿಡಿದು ನಿಂತಿರುವ 5 ಅಡಿ ಕಾಮನ್ ಮ್ಯಾನ್ ಪ್ರತಿಮೆ ಗೊಚರವಾಗುತ್ತದೆ. ಪ್ಲಾಸ್ಟಿಕ್ ಮತ್ತು ಫೈಬರ್ ನಿಂದ ನಿರ್ಮಾಣಗೊಂಡಿರುವ ಈ ಪ್ರತಿಮೆ ನೋಡಲು ಕಂಚಿನ ಪ್ರತಿಮೆಯಂತೆ ಕಾಣಿಸುತ್ತದೆ. ಪ್ರತಿಮೆಯನ್ನು ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆ.
ಮೈಸೂರು ರೈಲ್ವೆಯು ಪ್ರಸಿದ್ದ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಶಿಲ್ಪವನ್ನು ರೈಲು ಸಂಗ್ರಹಾಲಯದ ಆವರಣದಲ್ಲಿ ನಿಲ್ಲಿಸಿದ್ದು, ಇದು ವಿಭಾಗದ ಮತ್ತೊಂದು ನವೀನ ಉಪಕ್ರಮ ಹಾಗೂ ಇದು ಮ್ಯೂಸಿಯಂನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ತಿಳಿಸಿದ್ದಾರೆ.
ದಂತಕತೆಯಾದ ಆರ್.ಕೆ. ಲಕ್ಷ್ಮಣ್ ಮೈಸೂರಿನಲ್ಲಿಯೇ ಜನಿಸಿ, ಇಲ್ಲಿನ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದರು. ‘ಕಾಮನ್ ಮ್ಯಾನ್’ ಪಾತ್ರವು 1951 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ನಗರದಿಂದ ಬಂದ ಸೃಷ್ಟಿಕರ್ತನ ಸೃಜನಶೀಲ ಪ್ರತಿಭೆಗೆ ಇದು ಒಂದು ಸಣ್ಣ ಗೌರವವಾಗಿದೆ. ಹಾಗೆಯೇ, ರೂಪಾಂತರಗೊಂಡ ರೈಲು ವಸ್ತುಸಂಗ್ರಹಾಲಯಕ್ಕೆ ಕಾಮನ್ ಮ್ಯಾನ್ ಮತ್ತೊಂದು ಅನನ್ಯ ಆಕರ್ಷಣೆಯಾಗಿ ಸೇರಿದೆ.