ಮೈಸೂರು : ಮಹಾಮಾರಿ ಕೋವಿಡ್ ಬರದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮೈಸೂರು ಇಷ್ಟೊತ್ತಿಗೆ ಮಲೇರಿಯಾ ಮುಕ್ತ ಜಿಲ್ಲೆ ಎಂದು ಪ್ರಮಾಣಪತ್ರ ಪಡೆಯುತ್ತಿತ್ತು ಎಂದು ಆರೋಗ್ಯ ಇಲಾಖೆಯ ಮುಖ್ಯಸ್ಥ ಡಾ. ಚಿದಂಬರಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲೇರಿಯಾ ಮತ್ತು ಡೆಂಘೀ ಪ್ರಕರಣದ ಮಾಹಿತಿ ನಗರದಲ್ಲಿ ಮಲೇರಿಯಾ ಮತ್ತು ಡೆಂಘೀ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಕೋವಿಡ್ ಬಂದಿದ್ದರಿಂದ ಹಲವು ಕಾರ್ಯಕ್ರಮಗಳನ್ನು ನೆರವೇರಿಸಲು ಸಾಧ್ಯವಾಗಿಲ್ಲ. ಕಾರ್ಯಕ್ರಮ ನೆರೆವೇರಿದ್ದರೆ ಜಿಲ್ಲೆಯಲ್ಲಿನ ಮಲೇರಿಯಾ ಮತ್ತು ಡೆಂಘೀ ಪ್ರಕರಣದ ಅಂಕಿ - ಸಂಖ್ಯೆ ನೋಡಿ ಆರೋಗ್ಯ ಇಲಾಖೆ ಇಷ್ಟೊತ್ತಿಗೆ ಮಲೇರಿಯಾ ಮುಕ್ತ ಜಿಲ್ಲೆ ಎಂಬ ಪ್ರಮಾಣಪತ್ರ ನೀಡುತ್ತಿತ್ತು ಎಂದರು.
ಜಿಲ್ಲೆಯಲ್ಲಿ ಮಲೇರಿಯಾ ಮಾಯವಾಗಿದೆ. ಇತ್ತೀಚೆಗೆ ಪ್ರಕರಣ ಕಂಡು ಬಂದ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆದರೆ, ಅಲ್ಲಲ್ಲಿ ಡೆಂಘೀ ಪ್ರಕರಣಗಳು ವರದಿಯಾಗುತ್ತಿದೆ. ಮೈಸೂರು ಸ್ವಚ್ಛ ನಗರಿ ಆಗಿದ್ದರಿಂದ ಕಳೆದ 2 ವರ್ಷಗಳಿಂದ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ. 2008ರಲ್ಲಿ ಕೇವಲ 8 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಆದರೆ, ಇತ್ತೀಚೆಗೆ (2019-20) ಯಾವುದೇ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ. ನಮ್ಮ ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮಲೇರಿಯಾ ಬಗ್ಗೆ ಜಾಗೃತಿ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವುದರಿಂಲೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಹಾಗಾಗಿ ಮೈಸೂರು ಈಗ ಮಲೇರಿಯಾ ಮುಕ್ತ ಜಿಲ್ಲೆಯಾಗಿದೆ ಎಂದು ತಮ್ಮ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.
ಮಲೇರಿಯಾ ಮತ್ತು ಡೆಂಘೀ ಪ್ರಕರಣದ ಮಾಹಿತಿ ನೀಡುತ್ತಿರುವ ಆರೋಗ್ಯ ಇಲಾಖೆಯ ಮುಖ್ಯಸ್ಥ ಡಾ. ಚಿದಂಬರಂ. ಡೆಂಘೀ ಪ್ರಕರಣ ಬಗ್ಗೆ ಮಾಹಿತಿ ನೀಡಿದ ಡಾ. ಚಿದಂಬರಂ, ಡೆಂಘೀ ವರ್ಷಪೂರ್ತಿ ಇರುವ ಕಾಯಿಲೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 2013 ಮತ್ತು 2017 ರಲ್ಲಿ 6000 ಡೆಂಘೀ ಪ್ರಕರಣಗಳು ಕಂಡು ಬಂದಿದ್ದವು. 10,000 ಪಾಸಿಟಿವ್ ಕೇಸ್ಗಳು ಕಂಡು ಬಂದಿದ್ದು ಇಬ್ಬರು ಡೆಂಘಿಯಿಂದ ಮೃತಪಟ್ಟ ವರದಿಯಾಗಿದೆ. ಅದನ್ನು ಹೊರತುಪಡಿಸಿ 2018ರಲ್ಲಿ ಕನಿಷ್ಠ ಪ್ರಕರಣಗಳು ದಾಖಲಾದರೆ, 2020ರಲ್ಲಿ 23 ಪ್ರಕರಣಗಳು ವರದಿಯಾಗಿವೆ. ಲಾಕ್ಡೌನ್ ಹೇರಿಕೆಯಿಂದ ಜನರ ಓಡಾಟ ಕಡಿಮೆ ಇತ್ತು. ವಾಹನ ಸಂಚಾರ ಕೊರತೆಯಿಂದ ಸ್ವಚ್ಛ ಪರಿಸರ ನಿರ್ಮಾಣವಾಗಿದೆ. ಹಾಗಾಗಿ ಈ ವರ್ಷ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಇನ್ನೂ ಕುಸಿಯಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಮುಖ್ಯಸ್ಥರಾದ ಡಾ. ಚಿದಂಬರಂ.