ಮೈಸೂರು: ಕೊರೊನಾ ತುರ್ತು ಪರಿಸ್ಥಿತಿ ಘೋಷಿಸಿ, ಆರು ತಿಂಗಳ ಕಾಲ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಪಟ್ಟಭದ್ರರ ಹಿಡಿತದಲ್ಲಿರುವ ಕಾರಣ, ಸರ್ಕಾರದ ಆದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಬಡವರಿಗೆ ಹಳ್ಳಿಗಾಡಿನ ಜನರಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ, ಬಡವರಿಗೆ ಸುಲಭವಾಗಿ ಚಿಕಿತ್ಸೆ ಕೊಡಿಸಲು ನಿರ್ದಿಷ್ಟಪಡಿಸಿದ ಹಣ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಎಂದರು.
ಯಾವುದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ ರೋಗಿಯ ಹಣ ಪಾವತಿ ಮನ್ನಾ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳಲಿ. ಗ್ರಾಮೀಣ ಭಾಗದಲ್ಲಿ ಕೊರೊನಾ ಶಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ತಾಲೂಕು ಮಟ್ಟದಲ್ಲಿರುವ ಕೋವಿಡ್ ಕೇಂದ್ರಗಳು ಸಾಕಾಗುತ್ತಿಲ್ಲ. ಆದ್ದರಿಂದ ಹಳ್ಳಿಗಾಡಿನ ಜನ ನಗರ ಪ್ರದೇಶಗಳಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗಾಗಿ ಹುಡುಕಾಡುತ್ತಿದ್ದಾರೆ. ಆಸ್ಪತ್ರೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಹೆಚ್ಚುವರಿಯಾಗಿ ಕೋವಿಡ್ ಕೇಂದ್ರಗಳನ್ನು ಹಾಗೂ ತಾಲೂಕು ಮಟ್ಟದ ವಾರ್ ರೂಮ್ ತುರ್ತಾಗಿ ತೆರೆಯಬೇಕು. ಈ ಕೇಂದ್ರಗಳಿಗೆ ನಿವೃತ್ತ ವೈದ್ಯರ ಸೇವೆಯನ್ನ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.