ಮೈಸೂರು :ದಸರಾ ನಂತರ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆದಿದೆ. ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಮೈಸೂರಿನ ಕನಕಗಿರಿಯಲ್ಲಿರುವ ಸರ್ಕಾರಿ ಶಾರದಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆಯನ್ನು ಪ್ರಾರಂಭಿಸಬೇಡಿ ಎಂದು ತಜ್ಞರ ಸಮಿತಿ ಎಲ್ಲೂ ಹೇಳಿಲ್ಲ. ಎಚ್ಚರಿಕೆಯಿಂದ ಶಾಲೆ ಆರಂಭಿಸಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಶಾಲೆಗಳನ್ನು ಆರಂಭಿಸುವಂತೆ ಪೋಷಕರು ಕೂಡ ಒತ್ತಡ ಮಾಡುತ್ತಿದ್ದಾರೆ ಎಂದರು.
ಮಕ್ಕಳ ಮನಸ್ಸಿನಲ್ಲೂ ತರಗತಿ ಆರಂಭವಾಗಬೇಕು ಅಂತಾ ಭಾವನೆ ಇದೆ. ಡೆಂಘೀ ಹಾಗೂ ಸಂಕ್ರಾಮಿಕ ರೋಗಗಳ ಬಗ್ಗೆ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಹೇಗೆ ಎಂಬ ಸಲಹೆ ನೀಡಿದೆ. ಆತುರ ಬೇಡ, ತಡೆದು ಶಾಲೆ ಆರಂಭಿಸಿ ಎಂದು ತಜ್ಞರ ಸಮಿತಿ ಹೇಳಿದೆ ಎಂದು ತಿಳಿಸಿದರು.
ಮುಂದಿನ ವರ್ಷ ಪ್ರಾಥಮಿಕ ಶಿಕ್ಷಣದಲ್ಲಿಯೂ ನೂತನ ಶಿಕ್ಷಣ ನೀತಿ (ಎನ್ಇಪಿ) ತರಲು ಚಿಂತನೆ ಮಾಡಲಾಗಿದೆ. ಈ ಸಂಬಂಧ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಸಮಿತಿ ನೀಡುವ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಸುರೇಶ್‌ಗೌಡ ರಾಜೀನಾಮೆ ಅವರ ವೈಯಕ್ತಿಕ ವಿಚಾರ, ರಾಜೀನಾಮೆ ನೀಡಲು ಯಾರು ಯಾರನ್ನು ಟಾರ್ಗೆಟ್ ಮಾಡ್ತಿಲ್ಲ ಎಂದರು.