ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ತಗ್ಗಿದ್ದು ಸರ್ಕಾರ ಮೈಸೂರಿನ ಶಾಲಾ-ಕಾಲೇಜು (9, 10, ಪ್ರಥಮ ಹಾಗೂ ದ್ವಿತೀಯ ಪಿಯುಸಿ)ಗಳಲ್ಲಿ ಭೌತಿಕ ತರಗತಿ ನಡೆಸಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಬೋಧಿಸುವಂತೆ ಸೂಚನೆ ನೀಡಿದೆ. ಈ ಮೂಲಕ ಕೇರಳದ ಗಡಿಭಾಗವಾಗಿದ್ದರೂ ಸಹ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಹಸಿರು ನಿಶಾನೆ ಸಿಕ್ಕಂತಾಗಿದೆ.
ಮೈಸೂರಿನಲ್ಲಿ ತಗ್ಗಿದ ಕೊರೊನಾ: ಶಾಲಾ-ಕಾಲೇಜು ತೆರೆಯಲು ಸರ್ಕಾರದ ಸೂಚನೆ
ಮೈಸೂರಿನಲ್ಲಿ ಕೊರೊನಾ ಪ್ರಸರಣ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಭೌತಿಕ ತರಗತಿ ನಡೆಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಡಿಪಿಯುಇ ಡಿ.ಕೆ ಶ್ರೀನಿವಾಸ್ ಮೂರ್ತಿ, ಈಗಾಗಲೇ ರಾಜ್ಯ ಸರ್ಕಾರದ ಸೂಚನೆಯಂತೆ ಶಾಲಾ-ಕಾಲೇಜು ತೆರೆದು ಎಸ್ಒಪಿ (ಪ್ರಮಾಣಿತ ಕಾರ್ಯಚರಣೆ ವಿಧಾನ) ನಿಯಮ ಪಾಲಿಸುವಂತೆ ಪ್ರಾಚಾರ್ಯರ ಸಭೆಯಲ್ಲಿ ಸೂಚನೆ ನೀಡಲಾಗಿದೆ. ತರಗತಿಯಲ್ಲಿ ಕೊರೊನಾ ನಿಯಮ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಂತೆ ಇರುವ ಎಚ್.ಡಿ ಕೋಟೆಯಲ್ಲಿ ಪ್ರತಿ ಕಾಲೇಜುಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಿ ತರಗತಿ ಆರಂಭಿಸಲಾಗುವುದು ಎಂದು ತಿಳಿಸಿದರು.