ಮೈಸೂರು: ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣಗೊಂಡಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ 'ಬೀದಿ ನಾಯಿಗಳ ಆರೈಕೆ ಕೇಂದ್ರ' ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿ ಯಾವ ರೀತಿಯ ಸೌಲಭ್ಯಗಳಿವೆ? ಎಷ್ಟು ವೆಚ್ಚದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜ್ ಈಟಿವಿ ಭಾರತಕ್ಕೆ ವಿವರ ನೀಡಿದರು.
ಶೀಘ್ರದಲ್ಲೇ ಉದ್ಘಾಟನೆ: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನ ಹೊರವಲಯದ ಎಚ್.ಡಿ.ಕೋಟೆ ರಸ್ತೆಯ ರಾಯನಕೆರೆ ಬಳಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ (ಬೀದಿ ನಾಯಿಗಳ ಆರೈಕೆ ಕೇಂದ್ರ) ಉದ್ಘಾಟನೆಗೆ ಸಿದ್ದವಾಗಿದೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಸರ್ಕಾರದ 2.50 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಕೇಂದ್ರವು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು: ಮೈಸೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು, ಅವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಈ ಕೇಂದ್ರವನ್ನು ಉಪಯೋಗಿಸಲಾಗುವುದು. ಜೊತೆಗೆ ರೋಗಗ್ರಸ್ತ ನಾಯಿಗಳು ಹಾಗೂ ಅಪಘಾತಕ್ಕೆ ಒಳಗಾದ ನಾಯಿಗಳನ್ನು ಇಲ್ಲಿಗೆ ತಂದು ಚಿಕಿತ್ಸೆ ಕೊಡಿಸಲಾಗುವುದು. ಅಲ್ಲದೇ, ರೇಬಿಸ್ ಬಂದ ನಾಯಿಗಳನ್ನು ಕರೆದುಕೊಂಡು ಬಂದು ಪ್ರತ್ಯೇಕ ಚಿಕಿತ್ಸೆ ಕೊಡಿಸಿ, ಅವುಗಳನ್ನು ಗುಣಮುಖ ಮಾಡುವುದು ಈ ಕೇಂದ್ರದಲ್ಲಿನ ಕೆಲಸವಾಗಿರಲಿದೆ.