ಮೈಸೂರು: "ಬಸವರಾಜ ಬೊಮ್ಮಾಯಿ ಅವರು ಈ ಅವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದು, ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ರೈತರ ಪರವಾಗಿರುವ 20 ಅಂಶಗಳ ಕಾರ್ಯಕ್ರಮದ ವಿವರವನ್ನು ಪತ್ರದ ಮೂಲಕ ಅವರಿಗೆ ಕಳುಹಿಸಿದ್ದೇವೆ" ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರಿನಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು 2023 ಹಾಗೂ 24ನೇ ಸಾಲಿನ ಆಯವ್ಯಯದಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗುವ ಈ ಅಂಶಗಳನ್ನು ಪರಿಗಣಿಸಬೇಕು" ಎಂದು ಮನವಿ ಮಾಡಿದರು.
20 ಅಂಶಗಳೇನು?: ರೈತ ಸಮುದಾಯಕ್ಕೆ ಮಾರಕವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು. ಆಂಧ್ರ ಪ್ರದೇಶದ ಸರ್ಕಾರದ ಮಾದರಿ ಮುಂಗಾರಿನಲ್ಲಿ ರೈತರಿಗೆ ಎಕರೆಗೆ 10 ಸಾವಿರ ನಗದು ಸಹಾಯಧನ ನೀಡಬೇಕು. ನಾಟಿ ಹಸುಗಳನ್ನು ಸಾಕಲು ಗುಜರಾತ್ ಸರ್ಕಾರದ ಮಾದರಿಯಲ್ಲಿ ತಿಂಗಳಿಗೆ 400 ರೂ ಸಹಾಯಧನ ನೀಡಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 50 ರೂ ನೀಡುವ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು, ಕೃಷಿಗಾಗಿ ಆವರ್ತ ನಿಧಿ ಸ್ಥಾಪಿಸಬೇಕು. ಕಡಿಮೆ ದರದಲ್ಲಿ ಕೃಷಿ ಸಾಲ ನೀಡಬೇಕು. ಕಾಡಂಚಿನ ಗ್ರಾಮಗಳಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ನಡೆಯುವ ಸಂಘರ್ಷ ತಡೆಯಲು ಯೋಜನೆ ರೂಪಿಸಬೇಕು.