ಮೈಸೂರು: ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಒಬ್ಬಂಟಿಯಲ್ಲ, ಅವರ ಜೊತೆಗೆ ನಾವೆಲ್ಲರೂ ಇದ್ದೇವೆ. ಅವರನ್ನು ನಾವು ಯಾರೂ ದೂರ ಮಾಡಿಲ್ಲ. ಅವರ ಕರೆಗೆ ನಾವೆಲ್ಲರೂ ಸ್ಪಂದಿಸುತ್ತಿದ್ದೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಅವರು ಯಾರನ್ನೂ ದೂರ ಇಡುವವರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಮೇಲೆ ಯಾವುದೇ ಆರೋಪ ಮಾಡಿದರೂ ಸುಳ್ಳು. ವಿಶ್ವನಾಥ್ ಯಾಕೆ ತಮ್ಮನ್ನು ಮುಖ್ಯಮಂತ್ರಿಗಳು ದೂರಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.
ಸಂಪುಟ ವಿಸ್ತರಣೆಯಿಂದ ಯಾರೂ ಅಸಮಾಧಾನಗೊಂಡಿಲ್ಲ, ಯಾವ ಪ್ರತ್ಯೇಕ ಸಭೆಯೂ ಇಲ್ಲ. ಊಟಕ್ಕೆ ಕರೆದಿದ್ದರೆ ಹೋಗಿರುತ್ತಾರೆ. ಅದು ಬಿಟ್ಟು ಬೇರೆ ಸಭೆಗಳು ನಡೆದಿಲ್ಲ. ಮುಖ್ಯಮಂತ್ರಿಗಳ ಸೂಚನೆಯಂತೆ ಮುಂದಿನ ತಾಲೂಕು ಪಂಚಾಯಿತಿ ಚುನಾವಣೆಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಅದು ಬಿಟ್ಟು ಬೇರೆ ವಿಚಾರಗಳು ಇಲ್ಲ ಎಂದು ಹೇಳಿದರು.