ಮೈಸೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿಯ ಬಗ್ಗೆ ಡಿ.ಕೆ ಶಿವಕುಮಾರ್ ಅವರಿಗೆ ಸಂಪೂರ್ಣವಾಗಿ ಗೊತ್ತಿದೆ. ಹೀಗಾಗಿ ಶಾಸಕ ಜಮೀರ್ ಅಹಮದ್ ಮನೆ ಮೇಲಿನ ನಡೆದ ದಾಳಿ ಹಿಂದೆ ಡಿ.ಕೆ.ಶಿವಕುಮಾರ್ ಅವರ ಕೈವಾಡ ಏಕೆ ಇರಬಾರದು? ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಇಡಿ ದಾಳಿ ರಾಜಕೀಯ ಪ್ರೇರಿತ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಜಮೀರ್ ಅಹಮದ್ ಅವರು ಪದೇ ಪದೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಿದ್ದರು. ಈ ವಿಚಾರವನ್ನು ಜೀರ್ಣಿಸಿಕೊಳ್ಳಲು ಆಗದೇ ಡಿ.ಕೆ.ಶಿವಕುಮಾರ್ ಅವರೇ ಜಮೀರ್ ಮನೆ ಮೇಲೆ ಈ ದಾಳಿ ಮಾಡಿಸಿರಬಹುದು ಎಂದು ಆರೋಪಿಸಿದರು.
ಇಡಿ ದಾಳಿಯ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಆರೋಪ ಮಾಡುತ್ತಿರುವವರಿಗೆ ನಾವೂ ಸಹ ಡಿಕೆಶಿ ಮಾಡಿಸಿರಬಹುದು ಎಂದು ಹೇಳಬಹುದಲ್ಲ. ಐ.ಟಿ ಮತ್ತು ಇ.ಡಿ ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ವ್ಯವಹಾರ ಸರಿ ಇದ್ದಾಗ ಹೆದರುವ ಅವಶ್ಯಕತೆ ಏನಿದೆ ಎಂದರು.