ಕರ್ನಾಟಕ

karnataka

ETV Bharat / state

ಪಕ್ಷಕ್ಕೆ ಬರುವಾಗ ಜಾಮೂನು, ಅಧಿಕಾರ ಮುಗಿದ ಮೇಲೆ ವಿಷ : ಬಿಜೆಪಿ ವಿರುದ್ಧ ಎಸ್ ಟಿ ಸೋಮಶೇಖರ್ ಅಸಮಾಧಾನ - etv bharat karnataka

ನಾನು ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿ ಪಕ್ಷದಲ್ಲೇ ಇದ್ದೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲ ಊಹಾಪೋಹ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

Etv Bharatst-somashekhar-outrages-on-bjp-party
ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು, ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ: ಎಸ್ ಟಿ ಸೋಮಶೇಖರ್

By ETV Bharat Karnataka Team

Published : Nov 8, 2023, 3:10 PM IST

Updated : Nov 8, 2023, 3:30 PM IST

ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ

ಮೈಸೂರು: "ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ" ಎಂದು ಬಿಜೆಪಿಯ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ಹೊರ ಹಾಕಿದರು. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಕಾಂಗ್ರೆಸ್ ನಲ್ಲಿದ್ದೆ, ಅವರಾಗಿಯೇ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್ ಟಿ ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ನನ್ನನ್ನು ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಮತ್ತು ಡಿಸಿಎಂ ಬಳಿ ಹೋಗುತ್ತೇನೆ. ಇದರಲ್ಲಿ ತಪ್ಪೇನು. ನಾನು ಸಿಎಂ, ಡಿಸಿಎಂರನ್ನು ಹೊಗಳುವುದನ್ನು ಸಹಿಸುವುದಿಲ್ಲ. ನನ್ನ ಕಚೇರಿಯಿಂದ ಕಾಂಗ್ರೆಸ್ ಗ್ಯಾರಂಟಿ ಫಾಲೋ ಅಪ್ ಮಾಡುತ್ತೇನೆ. ಇದರಿಂದ ನನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಗ್ಯಾರಂಟಿಗೆ ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಬಿಜೆಪಿಯವರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಆದರೆ, ಸರ್ಕಾರ ಯಾವುದೇ ಇರಲಿ ಜನರಿಗೆ ಒಳ್ಳೆಯದು ಮಾಡುವುದು ಬೇಡವೇ" ಎಂದು ಪ್ರಶ್ನಿಸಿದರು.

ಬರ ಅಧ್ಯಯನದಿಂದ ಏನು ಪ್ರಯೋಜನವಿಲ್ಲ: "ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ, ಅಧಿಕಾರಿಗಳು ಬರ ಅಧ್ಯಯನ ಮಾಡಿ ಹೋಗಿದ್ದಾರೆ. ನಾವು ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರದವರಿಗೆ ಮನವರಿಕೆ ಮಾಡಿಕೊಡಬೇಕು. ಅದನ್ನು ಬಿಟ್ಟು ಬರ ಅಧ್ಯಯನ ಪ್ರವಾಸ ಮಾಡಿದರೆ ಯಾವುದೇ ಅನುಕೂಲ ಇಲ್ಲ" ಎಂದು ಬಿಜೆಪಿ ಪಕ್ಷದಿಂದ ನಡೆಯುತ್ತಿರುವ ಬರ ಅಧ್ಯಯನದ ಬಗ್ಗೆ ಮಾಜಿ ಸಚಿವರು ಪರೋಕ್ಷವಾಗಿ ಟೀಕಿಸಿದ್ದಾರೆ.

ಈಶ್ವರಪ್ಪನವರಿಗೆ ಯಾವುದೇ ಬೆಲೆ ಇಲ್ಲ:"ಪಕ್ಷದಲ್ಲಿ ಮಾಜಿ ಸಚಿವ ಈಶ್ವರಪ್ಪನವರಿಗೆ ಯಾವುದೇ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟುಹೋಗು ಅಂತ ಹೇಳಲು ಈಶ್ವರಪ್ಪ ಯಾರು. ಈಶ್ವರಪ್ಪನವರೇನು ರಾಜ್ಯಾಧ್ಯಕ್ಷರೇ. ನಾನು ಈಶ್ವರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬರಲಿಲ್ಲ. ಯಡಿಯೂರಪ್ಪನವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಈ ರೀತಿಯ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ‌. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ನಾನು ಪಕ್ಷದಲ್ಲಿದ್ದೇನೆ‌. ಈಗ ಯಾರೋ 5 ಜನ ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

"ಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿಲ್ಲ, ಅಶೋಕ್ ಕ್ಷೇತ್ರದಲ್ಲಿ ಹೋಗಿಲ್ಲವೇ, ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವೇ, ದಾಸರಹಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಹೋಗಿಲ್ಲವೇ, ಕೇವಲ ನನ್ನನ್ನೆ ಏಕೆ ಟಾರ್ಗೆಟ್ ಮಾಡುತ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆ. ಇದಕ್ಕೆ ಮಹತ್ವ ನೀಡುವುದು ಬೇಡ" ಎಂದು ಹೇಳಿದರು.

ನಾನು ಬಿಜೆಪಿ ಪಕ್ಷ ಬಿಟ್ಟು ಹೋಗುವುದಿಲ್ಲ:"ಮಾನಸಿಕವಾಗಿ, ದೈಹಿಕವಾಗಿ ನಾನು ಪಕ್ಷದಲ್ಲೇ ಇದ್ದೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲ ಊಹಾಪೋಹ. ಯಡಿಯೂರಪ್ಪ ಅವರ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ. ಆದರೆ, ಪಕ್ಷದ ಒಳಗೆ ನನ್ನನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನ ವಿರುದ್ಧ ಕೆಲಸ ಮಾಡಿದ್ದರು. ಈ ಬಗ್ಗೆ ದೂರು ಕೊಟ್ಟರು ಏನೂ ಪ್ರಯೋಜನವಾಗಲಿಲ್ಲ. ಅವರ ಹುಟ್ಟು ಹಬ್ಬವನ್ನೇ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಾಡಿದರು. ಇದರ ಅರ್ಥವೇನು" ಎಂದು ಪ್ರಶ್ನಿಸಿದರು.

"ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರೇ ನನ್ನನ್ನು ಉಳಿಸಿಕೊಂಡರು. ಯಡಿಯೂರಪ್ಪನವರ ವಿರುದ್ಧ ಐದಾರು ಜನ ಮಾತನಾಡಿದರು, ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿಲ್ಲ. ಇದು ಕೂಡ ಪಕ್ಷದ ಹಿನ್ನಡೆಗೆ ಪ್ರಮುಖ ಕಾರಣವಾಯಿತು" ಎಂದರು.

ಇದನ್ನೂ ಓದಿ:'2A ಮೀಸಲಾತಿಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗ ಹಿಡಿದು ಕುಳಿತು ಹೋರಾಟ'

Last Updated : Nov 8, 2023, 3:30 PM IST

ABOUT THE AUTHOR

...view details