ಮೈಸೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರೇ ಹೀರೋ, ಅವರೇ ವಿಲನ್ ಎಂದು ಬಾಯ್ತಪ್ಪಿನಿಂದ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದು, ಬಳಿಕ ಸ್ಪಷ್ಟನೆ ನೀಡಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆ ಸಮರದಲ್ಲಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಸ್ಪರ ವಿಲನ್ಗಳೆಂದು ದೂರುತ್ತಿದ್ದಾರೆ. ಇವರಿಬ್ಬರಲ್ಲಿ ನಿಜವಾದ ವಿಲನ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರೂ ವಿಲನ್ ಅಲ್ಲ. ಸಿಎಂ ಯಡಿಯೂರಪ್ಪ ಅವರೇ ನಿಜವಾದ ವಿಲನ್ ಎಂದರು.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಶಾಸಕ ರಾಮದಾಸ್ ಉಪಸ್ಥಿತರಿದ್ದರು. ಈ ವೇಳೆ ಸಭೆಯಲ್ಲಿದ್ದವರು ಅರೆಕ್ಷಣ ದಂಗಾದರೂ, ತಕ್ಷಣ ಎಚ್ಚೆತ್ತ ಸಚಿವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರೇ ಹೀರೋ, ಅವರೇ ವಿಲನ್ ಎಂದರು.
ಸೆಟ್‌ಅಪ್ ಬಾಕ್ಸ್ ವಿಚಾರ:
ಆರ್.ಆರ್.ನಗರದಲ್ಲಿ ಉಚಿತವಾಗಿ ಸೆಟ್‌ಟಾಪ್ ಬಾಕ್ಸ್ ವಿತರಣೆ ಮಾಡುವ ವಿಚಾರವಾಗಿ ಮಾತನಾಡಿ, ಮುನಿರತ್ನ ನಾಲ್ಕು ವರ್ಷಗಳಿಂದ ಕೇಬಲ್ ಬಿಸಿನೆಸ್ ಮಾಡ್ತಿದ್ದಾರೆ. ಸೆಟ್‌ಟಾಪ್ ಬಾಕ್ಸ್ ಕೊಡ್ತಿರೋದು ಇದೇ ಮೊದಲೇನಲ್ಲ. ನಾನು ಆ ಸೆಟ್‌ಟಾಪ್ ಬಾಕ್ಸ್ ನೋಡಿದ್ದೇನೆ. ಅದರಲ್ಲಿ ಮುನಿರತ್ನ ಬಗ್ಗೆ ಮಾಹಿತಿ ಬರುತ್ತೆ. ಚುನಾವಣಾ ಆಯೋಗ ಇದನ್ನು ಗಮನಿಸಲಿದೆ ಎಂದರು.
'ದಸರಾ ಲೆಕ್ಕ ಕೊಡುವೆ'
ನವೆಂಬರ್ 1ಕ್ಕೆ ಮೈಸೂರು ದಸರಾದ ವಿವರವಾದ ಲೆಕ್ಕ ಕೊಡುವೆ. ಈ ಬಾರಿ ಮೈಸೂರು ದಸರಾಗೆ ಒಟ್ಟು 15 ಕೋಟಿ ರೂ ಅನುದಾನ ಬಂದಿತ್ತು. ಅದರಲ್ಲಿ ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕ ಕೊಡಲಾಗುವುದು ಎಂದರು.
ನವೆಂಬರ್ 1ರ ವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ದಸರಾ ದೀಪಾಲಂಕಾರ ಉಳಿಯಲಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯಹಿಸಿವೆ. ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರಿನ ಜನತೆಗೆ ಧನ್ಯವಾದ ಅರ್ಪಿಸಿದರು.