ಮೈಸೂರು: ಯಶಸ್ವಿಯಾಗಿ 2 ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿದ ಕೀರ್ತಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಇಂದು ಕೋವಿಡ್ ಸ್ಥಿತಿಗತಿಯ ಬಗ್ಗೆ ಜಿಲ್ಲಾಮಟ್ಟದ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಹ ಆನ್ಲೈನ್ ಪಾಠ ಕೇಳಿ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರು ಸಹ ಉತ್ತಮವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಇಡಿ ದೇಶದಲ್ಲೇ ಕರ್ನಾಟಕ ಕಳೆದ 2 ವರ್ಷಗಳಿಂದ ಕೊರೊನಾ ನಡುವೆಯೂ ಕೂಡ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ಕೀರ್ತಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಲ್ಲಬೇಕು ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಕೀರ್ತಿ ಸುರೇಶ್ ಕುಮಾರ್ ಅವರಿಗೆ ಸಲ್ಲುತ್ತದೆ ದಸರಾ ಆಚರಣೆ ಬಗ್ಗೆ ತೀರ್ಮಾನ: ದಸರಾ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಒಂದೆರಡು ವಾರಗಳಲ್ಲಿ ಕೋವಿಡ್ ಹೆಚ್ಚಾಗುತ್ತದೋ ಅಥವಾ ಕಡಿಮೆಯಾಗುತ್ತದೋ ಎಂಬುದನ್ನು ನೋಡಿಕೊಂಡು ಹೈ ಪವರ್ ಕಮಿಟಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಕೋವಿಡ್ ಮೂರನೇ ಅಲೆ ಬರದಂತೆ ದೇವರಲ್ಲಿ ಪ್ರಾರ್ಥನೆ ಮಾಡೋಣ: ಮೈಸೂರಿನಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 1.19 ಇದೆ. ಕಳೆದ ಒಂದು ವಾರದಿಂದ 20 ಜನ ಸಾವನ್ನಪ್ಪಿದ್ದಾರೆ. ಕೋವಿಡ್ 3ನೇ ಅಲೆ ಬಾರದಿರಲು ದೇವರಲ್ಲಿ ಪ್ರಾರ್ಥಿಸೋಣ. ಬಂದ್ರೂ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಗಡಿ ಭಾಗಗಳಲ್ಲಿ ಕೊರೊನಾ ತಪಾಸಣೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಆರ್ಟಿಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದೆ. ಗಡಿ ಭಾಗದಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಲು ಸೂಚಿಸಲಾಗಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮಗಳಲ್ಲಿ ಹೆಲ್ತ್ ಕ್ಯಾಂಪ್: ಇನ್ನೂ ಮಕ್ಕಳ ಮೇಲೆ ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಹೆಲ್ತ್ ಕ್ಯಾಂಪ್ ಮಾಡಲಾಗುವುದು. ಅಪೌಷ್ಟಿಕತೆ ಇರುವ ಮಕ್ಕಳಿಗೆ ಕಿಟ್ ನೀಡುವ ಆ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುವುದು ಎಂದು ಸಿಎಂ ವಿವರಿಸಿದರು.
ಡಿಪಿಆರ್ ಅನುಮತಿ ಪಡೆಯಲು ದೆಹಲಿಗೆ ಹೋಗುತ್ತೇನೆ: ಮೇಕೆದಾಟು ಯೋಜನೆ ಜಾರಿಗೆ ಮೊದಲು ಡಿ.ಪಿ.ಆರ್. ಕ್ಲಿಯರ್ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಭೇಟಿಗಾಗಿ ಮುಂದಿನ 10 ದಿನಗಳಲ್ಲಿ ನಾನೇ ಲೀಗಲ್ ಟೀಮ್ ನೊಂದಿಗೆ ದೆಹಲಿಗೆ ಹೋಗುತ್ತೇನೆ. ಶೀಘ್ರವೇ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ ಎಂದರು.