ಮೈಸೂರು: ಹಿಂದೂ ಕಾರ್ಯಕರ್ತರು ಒಬ್ಬೊಬ್ಬರೇ ಓಡಾಡಬೇಡಿ ಎಂದು ಮಾಜಿ ಸಚಿವ ಶ್ರೀರಾಮುಲು ಕಾರ್ಯಕರ್ತರಿಗೆ ಮನವಿ ಮಾಡಿದರು. ತಿ.ನರಸೀಪುರ ತಾಲೂಕಿನ ಯುವ ಬ್ರಿಗೇಡ್ ಕಾರ್ಯಕರ್ತ ಮೃತ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಶ್ರೀರಾಮುಲು ವೇಣುಗೋಪಾಲ್ ಪತ್ನಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು " ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಮೋಸ ವಂಚನೆಯಿಂದ ಕೊಲ್ಲುತ್ತಾರೆ" ಎಂದು ಆಡಳಿತ ಪಕ್ಷದ ವಿರುದ್ಧ ಗುಡುಗಿದರು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ.
ಇಲ್ಲಿ(ಮೈಸೂರು) ಧರ್ಮದ ವಿಚಾರವಾಗಿ ನಡೆದಿರುವ ಕೊಲೆ ಇದು. ಧರ್ಮ ಅಂತ ಬಂದಾಗ ನಾವೆಲ್ಲ ಒಂದೆ. ಇದರಲ್ಲಿ ಯಾವುದೇ ಪಕ್ಷ ಎನ್ನುವುದು ಇಲ್ಲ. ಕೊಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಯಾರ ಕುಮ್ಮಕ್ಕಿನಿಂದ ಆಗಿರುವುದು ಎಂಬುದು ಗೊತ್ತಾಗುತ್ತದೆ. ವೇಣುಗೋಪಾಲ್ ಫೋನ್ ಪರಿಶೀಲನೆ ಮಾಡಿದರೆ ಯಾರೆಲ್ಲ ಕರೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ವೇಣುಗೋಪಾಲ್ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡಿದ್ದ. ಹನುಮ ಜಯಂತಿ ಮಾಡಿದ್ದಾನೆ. ಆತ ಯಾವುದೇ ಕ್ರಿಮಿನಲ್ ಕೆಲಸ ಮಾಡಿಲ್ಲ ಎಂದು ಹರಿಹಾಯ್ದರು.
'ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಹತ್ಯೆಗಳಾಗುತ್ತವೆ': ಇದಕ್ಕೂ ಮೊದಲುಇಲ್ಲಿನ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆಗಳಾಗುತ್ತವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.